ಬೆಂಗಳೂರು: ಸಂಸದೆ ಸುಮಲತಾಗೆ ಕಾವೇರಿ ನೀರು ಹಂಚಿಕೆ ಕುರಿತಾದ ದೊಡ್ಡ ಜವಾಬ್ದಾರಿ ಹೆಗಲೇರಿದೆ. ಈ ಕುರಿತು ಮಾತನಾಡಿದ ಸುಮಲತಾ ಒಗ್ಗಟ್ಟಾಗಿ ಕೆಲಸ ಮಾಡಿ ಇದನ್ನ ಬಗೆ ಹರಿಸೋಣ ಅಂತ ಹೇಳಿದ್ದಾರೆ.
ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ಆಯೋಜಿಸಲಾಗಿರೋ ಅಂಬರೀಶ್ ಹುಟ್ಟಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಸುಮಲತಾ, ಮಂಡ್ಯ ಜನತೆ ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಕೇವಲ 5 ನಿಮಿಷದ ಪಬ್ಲಿಸಿಟಿಯಿಂದ ಯಾವ ಪ್ರಯೋಜನವೂ ಇಲ್ಲ. ನಾನಿನ್ನೂ ಪ್ರಮಾಣವಚನ ಸ್ವೀಕರಿಸಿಯೇ ಇಲ್ಲ, ಆಗಲೇ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರೆಲ್ಲಾ ಸೋತ ಹತಾಶೆಯಿಂದಾಗಿ ಈ ರೀತಿ ಮಾತನಾಡುತ್ತಿದ್ದಾರೆ ಅಂತ ಸುಮಲತಾ ಉತ್ತರಿಸಿದ್ದಾರೆ.
ನನ್ನ ಪತಿ ಅಂಬರೀಶ್ ರವರೇ ನನಗೆ ಸ್ಪೂರ್ತಿ, ಅವರು ಇಲ್ಲ ಅಂತ ಯಾವತ್ತಿಗೂ ಅನ್ನಿಸೋದಿಲ್ಲ. ಸದಾ ಅವ್ರು ನಮ್ಮ ಜೊತೆಯಲ್ಲೇ ಇದ್ದಾರೆ. ಅಂಬಿ ಹೇಳಿದ ಮಾತುಗಳೇ ನನಗೆ ಶಕ್ತಿ ಅಂತ ಪತಿ ಅಂಬರೀಶ್ ರನ್ನು ನೆನೆದರು.
ಇನ್ನು ಕಾವೇರಿ ನೀರು ಹಂಚಿಕೆ ಕುರಿತಾಗಿ ಮಾತನಾಡಿದ ಸುಮಲತಾ, ಕಾವೇರಿ ವಿಚಾರವಾಗಿ ಯಾರು ರಾಜಕೀಯ ಮಾಡಬಾರದು. ನೀರಿನ ವಿಚಾರದಲ್ಲಿ ರಾಜಕೀಯ ಮಾಡಿದ್ರೆ ರೈತರಿಗೆ ಅನ್ಯಾಯವಾಗುತ್ತೆ. ಈಗಾಗಲೇ ನಾನು ತಜ್ಞರೊಂದಿಗೆ ಭೇಟಿ ಮಾಡಿ ಚರ್ಚಿಸಿದ್ದೇನೆ. ಒಗ್ಗಟ್ಟಾಗಿ ಕೆಲಸ ಮಾಡಿದ್ರೆ ಎಂಥಾ ಕೆಲಸ ಬೇಕಾದ್ರೂ ಬೇಗ ಮಾಡಬಹುದು ಅಂತ ಸುಮಲತಾ ಹೇಳಿದ್ರು.
‘ಮಂಡ್ಯ ಜನ ಹೇಳಿದಂತೆ ಕೇಳ್ತೀನಿ’
ಇನ್ನು ಬಿಜೆಪಿ ಸೇರ್ಪಡೆ ಕುರಿತಾಗಿ ಪ್ರತಿಕ್ರಿಯಿಸಿದ ಸಂಸದೆ ಸುಮಲತಾ, ಮೊದಲಿನಿಂದಲೂ ಜನರ ಮಾತನ್ನು ಕೇಳುತ್ತಾ ಬಂದಿರೋ ನನಗೆ ಅವರು ಹೇಗೆ ಹೇಳ್ತಾರೋ ಆ ಮಾತನ್ನ ಕೇಳ್ತೀನಿ ಅಂತ ಉತ್ತರಿಸಿದ್ದಾರೆ. ನನಗೆ ಮಂಡ್ಯ ಅಭಿವೃದ್ಧಿ ಮುಖ್ಯ, ನನಗೆ ಜನ ಮುಖ್ಯ. ಅವರ ನಿರೀಕ್ಷೆಗಳನ್ನಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಅಂತ ಮಂಡ್ಯ ಜನರಲ್ಲಿ ಸಂಸದೆ ಭರವಸೆ ಮೂಡಿಸಿದ್ದಾರೆ.
ಏನಾಯ್ತು ಬಂಡಾಯ, ಏನಾಯ್ತು ಆಪರೇಷನ್…? ಮಿಸ್ ಮಾಡದೆ ಈ ವಿಡಿಯೋ ನೋಡಿ