ಅತಿಥಿಗಳು ಅಂದರೆ ದೇವರಿದ್ದಂತೆ ಅನ್ನೋದು ಹಿಂದೂ ಸಂಪ್ರದಾಯದಲ್ಲಿರುವ ಮಾತು. ಯಾಕಂದ್ರೆ ಅತಿಥಿಗಳು ಬಂದಾಗ, ಮನೆಯಲ್ಲಿ ಖುಷಿ ತುಂಬಿರುತ್ತದೆ. ಬಗೆ ಬಗೆಯ ಅಡುಗೆಗಳನ್ನ ಮಾಡಿರುತ್ತಾರೆ. ಹಬ್ಬದ ವಾತಾವರಣವಿರುತ್ತದೆ. ಆದರೆ ಕೆಲವರನ್ನು ಅತಿಥಿಗಳೆಂದು ಎಂದಿಗೂ ಮನೆಗೆ ಬರಮಾಡಿಕೊಳ್ಳಬಾರದಂತೆ. ಹಾಗಾದ್ರೆ ಯಾರನ್ನ ಮನೆಗೆ ಅತಿಥಿಗಳೆಂದು ಬರಮಾಡಿಕೊಳ್ಳಬಾರದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯವರು ಕೊಂಕು ಮಾತನಾಡುವವರು. ಕೆಲವರಿಗೆ ಎಷ್ಟೇ ಚೆನ್ನಾಗಿ ಆತಿಥ್ಯ ಮಾಡಿದರೂ, ಅದನ್ನ ಸ್ವೀಕರಿಸುವ ಯೋಗ್ಯತೆ ಇರುವುದಿಲ್ಲ. ಅವರು ಪ್ರತಿಯೊಂದಕ್ಕೂ ಹೆಸರಿಡುತ್ತಾರೆ. ನೀವು ಮನೆಗೆ ಬಂದಾಗ, ಅದ್ಧೂರಿಯಾಗಿ ಬರ ಮಾಡಿಕೊಂಡರೆ, ತಮ್ಮ ಆಡಂಬರದ ಶ್ರೀಮಂತಿಕೆ ತೋರಿಸುತ್ತಾರೆ ಎಂದು ಹೇಳುತ್ತಾರೆ. ಸಿಂಪಲ್ ಆಗಿ ಆತಿಥ್ಯ ಮಾಡಿದರೆ, ಗತಿಗೆಟ್ಟವರ ಹಾಗೆ ನೋಡಿಕೊಂಡರು ಎನ್ನುತ್ತಾರೆ. ಅಂಥವರನ್ನ ಆತ್ಮ ಸಂತೃಪ್ತಿ ಇಲ್ಲದವರು ಎನ್ನಲಾಗತ್ತೆ. ನಿಮ್ಮ ಮನೆಗೆ ಬಂದ ಅತಿಥಿಗಳಲ್ಲಿ ಅಂಥವರಿದ್ದರೆ, ಅವರನ್ನೆಂದೂ ಮನೆಗೆ ಕರಿಯಬೇಡಿ.
ಎರಡನೇಯವರು ಲಂಚ ತೆಗೆದುಕೊಳ್ಳುವವರು. ಲಂಚದ ಹಣ ಕೊಡುವವರು ಎಂದಿಗೂ ಖುಷಿ ಖುಷಿಯಾಗಿ ಕೊಡುವುದಿಲ್ಲ. ಯಾಕಂದ್ರೆ ಅದು ಕಷ್ಟದ ಹಣವಾಗಿರುತ್ತದೆ. ಅದನ್ನು ಕೊಡುವಾಗ, ಹೊಟ್ಟೆ ಉರಿದುಕೊಂಡು, ಶಾಪ ಹಾಕಿಕೊಂಡೇ ಕೊಡುತ್ತಾರೆ. ಹಾಗಾಗಿ ಅಂಥ ಲಂಚ ತೆಗೆದುಕೊಂಡ ವ್ಯಕ್ತಿಯ ಆತಿಥ್ಯ ಮಾಡಿದರೆ, ನಿಮಗೆ ಎಂದಿಗೂ ಒಳ್ಳೆಯದಾಗುವುದಿಲ್ಲ.
ಮೂರನೇಯವರು ಮೋಸ ಮಾಡುವವರು. ಇವರು ನಿಮಗೆ ಮೋಸ ಮಾಡಬೇಕೆಂದೆನೂ ಇಲ್ಲ. ಇತರರಿಗೆ ಮೋಸ ಮಾಡುವವರು ಎಂದು ಗೊತ್ತಿದ್ದರೂ, ನೀವು ಅಂಥವರನ್ನು ಮನೆಗೆ ಕರೆಯಬಾರದು. ಇಂಥವರಿಗೆ ಆತಿಥ್ಯ ಮಾಡುವುದರಿಂದ, ಆ ಮೋಸದ ಪಾಪದಲ್ಲಿ ಗೊತ್ತಿದ್ದೋ, ಗೊತ್ತಿಲ್ಲದೆಯೋ, ನಾವೂ ಪಾಲುದಾರರಾಗುತ್ತೇವೆ.
ನಾಲ್ಕನೇಯವರು ಧರ್ಮಗಳಲ್ಲಿ ನಂಬಿಕೆ ಇಡದವರು. ಧರ್ಮದಲ್ಲಿ ನಂಬಿಕೆ ಉಳ್ಳವನು, ವ್ಯಕ್ತಿತ್ವದಲ್ಲೂ ಉತ್ತಮನಾಗಿರುತ್ತಾನೆ. ಏಕೆಂದರೆ, ಅವನಿಗೆ ಪಾಪ ಪುಣ್ಯಗಳ ಬಗ್ಗೆ ಅರಿವಿರುತ್ತದೆ. ಆದರೆ ಧರ್ಮ ವಿರೋಧಿಯಾದವನು, ಪಾಪ ಮಾಡುವಾಗ, ಯೋಚನೆ ಮಾಡುವುದಿಲ್ಲ. ಧಾರ್ಮಿಕ ನಂಬಿಕೆಗಳಿಗೆ ಬೆಲೆ ಕೊಡದವನು, ವಿಧೇಯನಾಗಿರಲು ಸಾಧ್ಯವೇ ಇಲ್ಲ. ಹಾಗಾಗಿ ಇಂಥವರನ್ನ ನಿಮ್ಮ ಮನೆಗೆ ಅತಿಥಿಯಾಗಿ ಕರಿಯಬೇಡಿ.
ಐದನೇಯವರು ಕಳ್ಳರು. ನಿಮ್ಮ ಮನೆಗೆ ಬಂದಾಗ, ಅಥವಾ ಯಾರದ್ದಾದರೂ ಮನೆಗೆ ಹೋದಾಗ, ಆ ವ್ಯಕ್ತಿ ಏನಾದರೂ ಕದ್ದೇ ಕದಿಯುತ್ತಾನೆಂದು ನಿಮಗೆ ಗೊತ್ತಿದ್ದರೆ, ನೀವು ಅಂಥವರನ್ನು ಅತಿಥಿಯಾಗಿ ಕರೆಯಬಾರದು.