Spiritual: ಮನುಷ್ಯ ತನ್ನ ಜೀವನದಲ್ಲಿ ಕೆಲ ಕೆಲಸಗಳನ್ನು ಆದಷ್ಟು ಬೇಗ ಮಾಡಬೇಕಂತೆ. ರಾವಣ ಸಾವನ್ನಪ್ಪುವ ವೇಳೆ, ಲಕ್ಷ್ಮಣನಿಗೆ ಒಂದು ಮಾತನ್ನು ಹೇಳುತ್ತಾರೆ. ಶುಭ ಕೆಲಸಗಳನ್ನ ಮಾಡುವುದಕ್ಕೆ ವಿಳಂಬ ಮಾಡಬಾರದು ಅಂತಾ. ಅದೇ ರೀತಿ ಇನ್ನೂ ಕೆಲ ಕೆಲಸಗಳನ್ನ ಮಾಡಲು ಎಂದಿಗೂ ಲೇಟ್ ಮಾಡಬಾರದಂತೆ. ಹಾಗಾದ್ರೆ ಯಾವ ಕೆಲಸ ಮಾಡುವಾಗ ಲೇಟ್ ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಕೆಲಸ, ಶುಭಕಾರ್ಯ. ರಾವಣ ಹೇಳಿದಂತೆ, ಮನೆಯಲ್ಲಿ ಯಾವುದೇ ಶುಭ ಸಮಾರಂಭ ಮಾಡುವುದಿದ್ದರೆ, ಅದಕ್ಕೆ ಬೇಕಾದ ಅನುಕೂಲಗಳನ್ನು ಮಾಡಿಕೊಂಡು, ಆ ಶುಭಕಾರ್ಯವನ್ನು ಮಾಡಿ ಮುಗಿಸಬೇಕು. ಮದುವೆ, ಮುಂಜೆ, ಗೃಹಪ್ರವೇಶ ಇಂಥ ಕಾರ್ಯಗಳನ್ನು ಬೇಗ ಮಾಡಬೇಕು. ಏಕೆಂದರೆ, ಇಂಥ ಕೆಲಸಗಳನ್ನ ಮಾಡಲು ಕೆಲವು ಅಷ್ಟೇ ಯೋಗ ಬರುತ್ತದೆ. ಹಾಗಾಗಿ ಆ ಯೋಗ ಬಂದಾಗಲೇ ಶುಭಕಾರ್ಯ ಮಾಡಿ ಮುಗಿಸಿ.
ಎರಡನೇಯ ಕೆಲಸ ಕ್ಷಮೆ ಕೇಳುವುದು. ನೀವು ತಪ್ಪು ಮಾಡಿದ್ದರೆ, ತಕ್ಷಣ ಯಾರ ಬಳಿ ಕ್ಷಮೆ ಕೇಳಬೇಕೋ, ಅವರ ಬಳಿ ಕ್ಷಮೆ ಕೇಳಿ. ಕೆಲವು ಬಾರಿ ತಪ್ಪು ಮಾಡದಿದ್ದಲ್ಲಿಯೂ ನೀವು ಕ್ಷಮೆ ಕೇಳಬೇಕಾಗುತ್ತದೆ. ಆಗ ಕ್ಷಮೆ ಕೇಳಿ, ಜಗಳವನ್ನು ಕೊನೆಗೊಳಿಸಬೇಕಾಗುತ್ತದೆ. ಹಾಗಂತ ಪದೇ ಪದೇ ಕ್ಷಮೆ ಕೇಳಿ, ನಿಮ್ಮ ಬೆಲೆಯನ್ನು ಕಡಿಮೆ ಮಾಡಿಕೊಳ್ಳಬೇಡಿ. ಅವಶ್ಯಕತೆ ಇರುವ ಸಂಬಂಧ ಉಳಿಸಿಕೊಳ್ಳಲಷ್ಟೇ ಕ್ಷಮೆ ಕೇಳುವುದು ಉತ್ತಮ.
ಮೂರನೇಯ ಕೆಲಸ ಚಿಕಿತ್ಸೆ ಪಡೆಯುವುದು. ನಿಮ್ಮ ಆರೋಗ್ಯದಲ್ಲಿ ಏರುಪೇರಾಗುತ್ತಿದೆ ಅಂತಾ ನಿಮಗೆ ಅನ್ನಿಸಿದರೆ, ಮೊದಲು ಮನೆಮದ್ದು ಮಾಡಿ. ಆದರೂ ಕಡಿಮೆಯಾಗದಿದ್ದಲ್ಲಿ, ವೈದ್ಯರ ಬಳಿ ಚಿಕಿತ್ಸೆ ಪಡೆಯಿರಿ. ಆರೋಗ್ಯ ಸಮಸ್ಯೆ ಕಡೆಗಣಿಸಿದರೆ, ಅದು ನಿಮ್ಮ ಜೀವವನ್ನೇ ತೆಗೆದುಕೊಳ್ಳಬಹುದು. ಹಾಗಾಗಿ ಆರೋಗ್ಯ ಸಮಸ್ಯೆ ಇದ್ದಲ್ಲಿ ಚಿಕಿತ್ಸೆ ಪಡೆಯಿರಿ.
ನಾಲ್ಕನೇಯ ಕೆಲಸ ಸಾಲ ತೀರಿಸುವುದು. ಇದು ತುಂಬಾ ಮುಖ್ಯವಾದ ಕೆಲಸ. ನೀವು ಯಾರ ಬಳಿಯಾದರೂ ಸಾಲ ಮಾಡಿದ್ದರೆ, ಅದನ್ನು ಆದಷ್ಟು ಬೇಗ ತೀರಿಸಿ. ಕಷ್ಟಪಟ್ಟು ಕೆಲಸ ಮಾಡಿಯಾದರೂ ಅದನ್ನು ತೀರಿಸಬೇಕು. ಏಕೆಂದರೆ ಅವರು ಬೇರೆಯವರ ಬಳಿ, ನಿಮ್ಮ ಬಗ್ಗೆ ತುಚ್ಛವಾಗಿ ಮಾತನಾಡಬಹುದು. ಅಥವಾ ನೀವು ಖುಷಿಯ ಕ್ಷಣವನ್ನು ಕಳೆದಿದ್ದು ಗೊತ್ತಾದರೆ, ನೋಡಿ ನೋಡಿ ಕಂಡವರ ದುಡ್ಡಲ್ಲಿ ಹೇಗೆ ಜೀವನ ಎಂಜಾಯ್ ಮಾಡ್ತಾರೆ ಅಂತಾ ಹಂಗಿಸುತ್ತಾರೆ. ಹಾಗಾಗಿ ಸಾಲ ತೀರಿಸುವುದು ತುಂಬಾ ಮುಖ್ಯವಾದ ಕೆಲಸ.