ಚುರುಮುರಿ ಅಂದ್ರೆ ಬೇಲ್ಪುರಿ ಮಾಡಬಹುದು, ಮಂಡಕ್ಕಿ ಉಂಡೆ, ಮಂಡಕ್ಕಿ ಉಪ್ಕರಿ ಮಾಡಬಹುದು ಅಂತಷ್ಟೇ ಎಲ್ಲರಿಗೂ ಗೊತ್ತು. ಆದ್ರೆ ನಾವಿಂದು ಚುರುಮುರಿ ಮತ್ತು ಪಾಲಕ್ ಬಳಸಿ ಸ್ಪೆಶಲ್ ರೆಸಿಪಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ..
ಬೇಕಾಗುವ ಸಾಮಗ್ರಿ: ಒಂದು ಕಪ್ ಚುರುಮುರಿ, ಒಂದು ಕಪ್ ಕಡಲೆ ಹಿಟ್ಟು, ಒಂದು ಕಪ್ ಸಣ್ಣಗೆ ಕತ್ತರಿಸಿದ ಪಾಲಕ್, ಒಂದು ಈರುಳ್ಳಿ, ಎರಡು ಹಸಿ ಮೆಣಸಿನಕಾಯಿ, ಕೊಂಚ ಜೀರಿಗೆ, ಒಂದು ಸ್ಪೂನ್ ಜಿಂಜರ್ ಗಾರ್ಲಿಕ್ ಪೇಸ್ಟ್, ಚಿಟಿಕೆ ಅರಿಶಿನ, ಅರ್ಧ ಸ್ಪೂನ್ ಗರಂ ಮಸಾಲೆ ಪುಡಿ, ಅರ್ಧ ಸ್ಪೂನ್ ಧನಿಯಾ ಪುಡಿ, ಕೊಂಚ ಕೊತ್ತೊಂಬರಿ ಸೊಪ್ಪು, ಅರ್ಧ ಸ್ಪೂನ್ ನಿಂಬೆಜ್ಯೂಸ್, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಬೇಕಾದಷ್ಟು ಎಣ್ಣೆ.
ಮಾಡುವ ವಿಧಾನ: ಚುರುಮುರಿಯನ್ನು 2 ನಿಮಿಷ ನೀರಿನಲ್ಲಿ ನೆನೆಸಿಡಿ. ನಂತರ ಹಿಂಡಿ ಮತ್ತೊಂದು ಬೌಲ್‌ಗೆ ಹಾಕಿ. ಇದಕ್ಕೆ ಪಾಲಕ್, ಈರುಳ್ಳಿ, ಹಸಿ ಮೆಣಸಿನಕಾಯಿ, ಜೀರಿಗೆ, ಜಿಂಜರ್ ಗಾರ್ಲಿಕ್ ಪೇಸ್ಟ್, ಅರಿಶಿನ, ಗರಂ ಮಸಾಲೆ ಪುಡಿ, ಧನಿಯಾ ಪುಡಿ, ಕೊತ್ತೊಂಬರಿ ಸೊಪ್ಪು, ನಿಂಬೆಜ್ಯೂಸ್, ಉಪ್ಪು, ಕಡಲೆ ಹಿಟ್ಟು, ಇವೆಲ್ಲವನ್ನೂ ಸೇರಿಸಿ, ಚಪಾತಿ ಹಿಟ್ಟಿನ ಹದಕ್ಕೆ ಕಲಿಸಿಕೊಳ್ಳಿ. ವಡೆ ರೀತಿ ಶೇಪ್ ಕೊಟ್ಟು, ಕಾದ ಎಣ್ಣೆಯಲ್ಲಿ ಕರಿದರೆ, ಚುರುಮುರಿ ವಡೆ ರೆಡಿ.