ದೇಹದಲ್ಲಿ ಉಷ್ಣತೆ ಹೆಚ್ಚಾದಾಗ, ಬಾಯಿ ಹುಣ್ಣಾಗುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಈ ಸಮಸ್ಯೆ ಕಾಡುವುದು ಹೆಚ್ಚು. ಬಾಯಿ ಹುಣ್ಣಾದಾಗ, ಏನನ್ನೂ ತಿನ್ನಲಾಗುವುದಿಲ್ಲ. ವಿಪರೀತ ಕಿರಿಕಿರಿಯಾಗುತ್ತದೆ. 3ರಿಂದ ನಾಲ್ಕು ದಿನವಾದ್ರೂ ಈ ಸಮಸ್ಯೆ ಕಾಡುತ್ತದೆ. ಹಾಗಾಗಿ ನಾವಿಂದು ಬಾಯಿ ಹುಣ್ಣಾದ್ರೆ, ಏನು ಮನೆ ಮದ್ದು ಮಾಡಬೇಕು ಎಂದು ಹೇಳಲಿದ್ದೇವೆ.
ದೇಹದಲ್ಲಿ ಪೋಷಕಾಂಶಗಳ ಕೊರತೆ, ವಿಟಾಮಿನ್ ಸಿ ಸರಿಯಾದ ಪ್ರಮಾಣದಲ್ಲಿ ಇಲ್ಲದಿರುವುದು, ದೇಹದಲ್ಲಿ ಉಷ್ಣತೆ ಹೆಚ್ಚಾಗಿರುವುದರಿಂದ, ಹೀಗೆ ಈ ಎಲ್ಲ ಕಾರಣಗಳಿಂದಲೂ ಬಾಯಿ ಹುಣ್ಣಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮಗೆ ಬಾಯಿ ಹುಣ್ಣಾದಾಗ, ನಿಮ್ಮ ದೇಹದವನ್ನು ತಂಪು ಮಾಡುವ ಕಡೆ ಗಮನ ಕೊಡಿ. ಎಳನೀರು, ಜೀರಿಗೆ ಕಶಾಯ, ಬಾಳೆಹಣ್ಣು, ಕಿತ್ತಳೆ ಹಣ್ಣು, ಹೀಗೆ ದೇಹಕ್ಕೆ ತಂಪು ನೀಡುವ ಹಣ್ಣು ತರಕಾರಿ ಸೇವಿಸಿ. ಟೀ, ಕಾಫಿ, ಮಸಾಲೆ ಪದಾರ್ಥ, ನಾನ್‌ವೆಜ್ ಸೇರಿ ದೇಹದಲ್ಲಿ ಉಷ್ಣತೆ ಹೆಚ್ಚಿಸುವ ಆಹಾರ ಸೇವಿಸಬೇಡಿ. ಹೀಗೆ ಮಾಡಿದ್ದಲ್ಲಿ, ಹುಣ್ಣಿನ ನೋವು ಹೆಚ್ಚಾಗುತ್ತದೆ.
ಬಾಯಿ ಹುಣ್ಣಾದಾಗ ಊಟವಾದ ಮೇಲೆ ಬಿ ಕಾಂಪ್ಲೆಕ್ಸ್ ಗುಳಿಗೆ ತೆಗೆದುಕೊಳ್ಳಿ. ಆದರೆ ಗುಳಿಗೆ ಅಗತ್ಯಕ್ಕಿಂತ ಹೆಚ್ಚು ಸೇವಿಸಕೂಡದು. ಒಂದೇ ಒಂದು ಗುಳಿಗೆ ಸೇವಿಸಿದ್ರೆ, ಸಾಕು. ಅದು ಕೂಡ ಊಟವಾದ ಮೇಲೆ, ತುಂಬಿದ ಹೊಟ್ಟೆಯಲ್ಲಿ ಗುಳಿಗೆ ತೆಗೆದುಕೊಳ್ಳಿ. ಜೊತೆಗೆ ಊಟದೊಂದಿಗೆ ಮೊಸರು, ಮಜ್ಜಿಗೆ, ತುಪ್ಪವನ್ನ ಬಳಸಿ, ಸಾರು ಸಾಂಬಾರ್ ಸೇವಿಸಲೇಬೇಡಿ. ಹೆಚ್ಚೆಚ್ಚು ನೀರು ಕುಡಿಯಿರಿ. ದೇಹಕ್ಕೆ ತಂಪು ನೀಡುವ ಆಹಾರ, ಹಣ್ಣು, ತರಕಾರಿ, ಸೊಪ್ಪು ಸೇವಿಸಿ. 3 ದಿನವಾದ್ರೂ ಬಾಯಿಯ ಹುಣ್ಣು ಕಡಿಮೆಯಾಗದಿದ್ದಲ್ಲಿ, ಖಂಡಿತ ವೈದ್ಯರ ಬಳಿ ವಿಚಾರಿಸಿ, ಚಿಕಿತ್ಸೆ ಪಡೆಯಿರಿ.




