Spiritual: ಉತ್ತಮವಾದ, ಆರೋಗ್ಯಕರ, ಬುದ್ಧಿವಂತ ಸಂತಾನ ಯಾರಿಗೆ ತಾನೇ ಬೇಡ ಹೇಳಿ. ಮಕ್ಕಳು ಬೇಕೆಂದು ಬಯಸುವ ಪ್ರತೀ ತಂದೆ ತಾಯಿಯೂ, ತಮಗೆ ಹುಟ್ಟುವ ಮಗು, ಚುರುಕಾಗಿರಲಿ, ಬುದ್ಧಿವಂತವಾಗಿರಲಿ, ಆರೋಗ್ಯವಾಗಿರಲಿ, ಅದರ ಭವಿಷ್ಯ ಅತ್ಯುತ್ತಮವಾಗಿರಲಿ ಎಂದು ಬಯಸುತ್ತಾರೆ. ಹಾಗಾದರೆ ಇಂಥ ಮಗು ಪಡೆಯಲು ಬಯಸುವವರು ಯಾವ ಧಾರ್ಮಿಕ ಸೂತ್ರಗಳನ್ನು ಅನುಸರಿಸಬೇಕು ಎಂದು ತಿಳಿಯೋಣ ಬನ್ನಿ..
ನಾವು ಈಗಾಗಲೇ ಹೇಳಿದ ಹಾಗೆ, ಪ್ರತೀ ತಂದೆ ತಾಯಿಯಾಗಬಯಸುವ ಸತಿ-ಪತಿಯ ಆಸೆಯೇ ಬುದ್ಧಿವಂತ, ಧೈರ್ಯವಂತ ಮತ್ತು ಆರೋಗ್ಯವಂತ ಸಂತಾನ. ಇಂಥ ಸಂತಾನ ಬೇಕೆಂದಲ್ಲಿ, ಮೊದಲು ನೀವು ಅನುಸರಿಸಬೇಕಾದ ಅಂಶವೆಂದರೆ, ನಿಮ್ಮ ಆರೋಗ್ಯ ಸರಿಯಾಗಿ ಇಟ್ಟುಕೊಳ್ಳುವುದು. ಹಾಗಾಗಿ ನೀವು ಮಗುವಿಗಾಗಿ ತಯಾರಿ ಮಾಡುವ ಅರ್ಧ ವರ್ಷ, ಅಂದರೆ 6 ತಿಂಗಳು ಮುಂಚಿಂದಲೇ ಮಾಂಸಾಹಾರ, ಮೊಟ್ಟೆ, ಮೊಟ್ಟೆ ಬೆರೆಸಿದ ತಿಂಡಿ, ಮದ್ಯ, ಧೂಮಪಾನ ಸೇವನೆ ಎಲ್ಲವನ್ನೂ ತ್ಯಜಿಸಬೇಕು. ಪತಿ-ಪತ್ನಿ ಇಬ್ಬರೂ, ಸೊಪ್ಪು, ತರಕಾರಿ, ಹಣ್ಣು, ಒಣಹಣ್ಣು, ಹಾಲು, ತುಪ್ಪ, ಮೊಸರು, ಮಜ್ಜಿಗೆ, ಎಲ್ಲವನ್ನೂ ಸೇವಿಸಬೇಕು.
ಇನ್ನು ಎರಡನೇಯ ಧಾರ್ಮಿಕ ಸೂತ್ರವೆಂದರೆ, ಪತಿ- ಪತ್ನಿ ಮಗುವಿವಾಗಿ ಸಂಭೋಗ ನಡೆಸುವಾಗ ಮುಹೂರ್ತವನ್ನು ನೋಡಿಕೊಂಡು , ಸರಿಯಾದ ಮುಹೂರ್ತದಲ್ಲಿ ಸಂತಾನ ಪ್ರಾಪ್ತಿ ಮಾಡಿಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ರಾತ್ರಿ ಹೊತ್ತು ಸರಸ ಸಲ್ಲಾಪ ಮಾಡಲಾಗುತ್ತದೆ. ಆದರೆ ಮನುಷ್ಯ ಯಾವುದೇ ಕಾರಣಕ್ಕೂ, ಯಾವ ದಿನವೂ, ಬೆಳಿಗ್ಗೆ ಎದ್ದ ಕೂಡಲೇ ಮತ್ತು ಮುಸ್ಸಂಜೆ ಹೊತ್ತಿನಲ್ಲಿ ಸರಸವಾಡಬಾರದು.
ಇದರಿಂದ ಮನೆಯಲ್ಲಿ ಸದಾ ಪತಿ-ಪತ್ನಿ ಜಗಳವಾಡಬೇಕಾಗುತ್ತದೆ. ದರಿದ್ರ ಮನೆಯನ್ನು ಆವರಿಸುತ್ತದೆ. ಏಕೆಂದರೆ ಇವೆರಡು ಹೊತ್ತು, ನಾವು ದೇವರಿಗೆ ದೀಪ ಹಚ್ಚಿ, ದೇವರನ್ನು ಬರ ಮಾಡಿಕೊಳ್ಳುವ ಹೊತ್ತು. ಈ ಹೊತ್ತಿನಲ್ಲಿ ನೀವು ನಿಮ್ಮ ಕೆಲಸದಲ್ಲೇ ಮುಳುಗಿದ್ದರೆ, ಲಕ್ಷ್ಮೀ ಕೋಪ ಮಾಡಿಕೊಂಡು ಮನೆ ಬಿಟ್ಟು ಹೋಗುತ್ತಾಳೆ. ಆಗ ಆರ್ಥಿಕ ಪರಿಸ್ಥಿತಿ ಹಾಳಾಗುವುದರ ಜೊತೆಗೆ, ನೆಮ್ಮದಿಯೂ ಹಾಳಾಗುತ್ತದೆ.