Wednesday, April 24, 2024

Latest Posts

ಜುಗಲ್ ಬಂದಿ ಎಂಬ ಭಾವನೆಗಳ ಬಂಧಿ…

- Advertisement -

ನಿರ್ದೇಶನ, ನಿರ್ಮಾಣ : ದಿವಾಕರ್ ಡಿಂಡಿಮ
ತಾರಾಗಣ: ಮಾನಸಿ ಸುಧೀರ್, ಯಶ್ ಶೆಟ್ಟಿ, ಸಂತೋಷ್ ಆಶ್ರಯ್, ಅರ್ಚನಾ ಕೊಟ್ಟಿಗೆ, ಅರವಿಂದ್ ರಾವ್, ಅಶ್ವಿನ್ ರಾವ್ ಪಲ್ಲಕ್ಕಿ.

 

ಒಂದು ಕಡೆ ಹುಡುಗ ಹುಡುಗಿಯ ವಾಸ್ತವತೆಯ ಮಾತು ಕತೆ. ಮತ್ತೊಂದೆಡೆ ಮೂಗ, ಕಿವುಡ ಮತ್ತು ಅಂಧನೊಬ್ಬನ ಪೀಕಲಾಟ. ಇನ್ನೊಂದೆಡೆ ತಾಯಿ ಆಗಬೇಕೆಂಬ ಹಂಬಲ ಇರೋ ಬಂಜೆಯೊಬ್ಬಳ ಒಳನೋವಿನ ಕಣ್ಣೀರು…

ಈ ಮೂರು ಟ್ರಾಕ್ ಇಟ್ಟುಕೊಂಡು ಒಂದೊಳ್ಳೆಯ ಬರಹದ ಮೂಲಕ ಗಟ್ಟಿ ಕಥೆ ಕಟ್ಟಿಕೊಟ್ಟಿರುವ ಜುಗಲ್ ಬಂದಿ, ನಿಜಕ್ಕೂ ಮನ ತಟ್ಟುವ ಚಿತ್ರ. ಒಂದೇ ಮಾತಲ್ಲಿ ಹೇಳೋದಾದರೆ, ಇದು ಎಲ್ಲರೊಳಗಿನ ಜುಗಲ್ ಬಂದಿ. ನೆನಪುಗಳ ಹೂರಣದ ಸಾರ ಇಲ್ಲಿ ಬಂಧುವಾಗಿದೆ ಮತ್ತು ಬಂದಿಯಾಗಿದೆ.

ನಿರ್ದೇಶಕ ದಿವಾಕರ್ ಡಿಂಡಿಮ ಅವರು ಮೊದಲ ಪ್ರಯತ್ನದಲ್ಲೇ ಬಾಲ್ ಬೀಟ್ ಮಾಡದೆ ಬೌಂಡರಿ ಟಚ್ ಮಾಡಿದ್ದಾರೆ. ಅವರೊಳಗೊಬ್ಬ ಅತ್ಯುತ್ತಮ ಬರಹಗಾರ ಇದ್ದಾನೆ. ಕನ್ನಡ ಚಿತ್ರರಂಗದಲ್ಲಿ ಬರಹಗಾರರಿಗೆ ಕೊರತೆ ಇಲ್ಲ ಅನ್ನೋದಕ್ಕೆ ಈ ಸಿನಿಮಾ ಮತ್ತೊಂದು ಸಾಕ್ಷಿ ಎನ್ನಬಹುದು.

ಜುಗಲ್ ಬಂದಿ ನೋಡಿ ಹೊರ ಬಂದವರಿಗೆ ಕೊಂಚ ಎದೆ ಭಾರ ಎನಿಸದಿರದು. ಕಾರಣ, ನಿರ್ದೇಶಕರು ಕಟ್ಟಿಕೊಟ್ಟಿರುವ ಈ ನೆಲದ ಗಟ್ಟಿ ಕಥೆ. ಅದರಲ್ಲೂ ವಾಸ್ತವಕ್ಕೆ ಹತ್ತಿರ ಎಂಬಂತೆ ಭಾಸವಾಗುವ ಪಾತ್ರಗಳು, ಸನ್ನಿವೇಶಗಳು ನೋಡುಗರ ಕಣ್ಮನ ತಟ್ಟುತ್ತವೆ. ಸೂಕ್ಷ್ಮ ಸಂವೇದನೆಯ ಅಂಶ ಸಿನಿಮಾದುದ್ದಕ್ಕೂ ಎಡತಾಕುತ್ತದೆ.

ಮೊದಲು ಇಲ್ಲಿ ಇಷ್ಟ ಆಗೋದು ಕಥೆ. ಅದು ಸಿಂಪಲ್ ಎನಿಸಿದರೂ, ನಿರೂಪಣೆ ವಿಷಯದಲ್ಲಿ ಗೊಂದಲವಿಲ್ಲ. ಆರಂಭದಿಂದ ಅಂತ್ಯದವರೆಗೂ ಚಿತ್ರಕಥೆಯ ಹಿಡಿತ ಸಡಿಲವಾಗಿಲ್ಲ. ಹಾಗಾಗಿ ಸಿನಿಮಾದ ಮೊದಲರ್ಧ ಮುಗಿಯೋದು ಗೊತ್ತಾಗಲ್ಲ. ದ್ವಿತಿಯಾರ್ಧ ಜುಗಲ್ ಬಂದಿಯ ಮಾತುಕತೆ ನೋಡುವ ಕುತೂಹಲ ಹೆಚ್ಚಿಸುತ್ತಾ ಹೋಗುತ್ತೆ.

ಇಲ್ಲಿ ಮುಖ್ಯವಾಗಿ ಆಸೆ, ದುರಾಸೆ, ಪ್ರೀತಿ, ಬದುಕು, ಹತಾಶೆ, ಅಸಹಾಯಕತೆ, ಹಂಬಲ ಇತ್ಯಾದಿ ಕಾಣಸಿಕ್ಕರೂ ಕೊಂಚ ತಿಳಿ ಹಾಸ್ಯದೊಂದಿಗೆ ಭಾವುಕತೆ ಹೆಚ್ಚಿಸುತ್ತಾ ಹೋಗುತ್ತದೆ. ಅದೇ ಸಿನಿಮಾದ ಜೀವಾಳ.

ಸಿನಿಮಾ ಸರಾಗವಾಗಿ ಸಾಗಲು ಸಂಗೀತ ಹಾಗು ಕ್ಯಾಮರಾ ಕೈಚಳಕ ಸಾಥ್ ನೀಡಿದೆ. ಖುಷಿ ಕೊಡೋದು ಸಂಭಾಷಣೆ. ಮಜವೆನಿಸೋ ದೃಶ್ಯಗಳ ಜೊತೆಯಲ್ಲೇ ಆಗಾಗ ತಾಯಿ ತನ್ನ ಮಗುವಿನಿಂದ ‘ಅಮ್ಮ’ ಅಂತ ಕರೆಸಿಕೊಳ್ಳಬೇಕೆಂಬ ಹಂಬಲದ ದೃಶ್ಯಕೂಡ ಇಲ್ಲಿ ಕಣ್ತುಂಬಿಸದೇ ಇರದು.

ಕಥೆ ಸಾರಾಂಶ ಇದು…

ಉದ್ಯಮಿಯೊಬ್ಬ ಖರೀದಿಸಿ ಮನೆಯೊಳಗಿಟ್ಟ ಬೆಲೆಬಾಳುವ ಕ್ರಿಸ್ಟಲ್ ಕದಿಯೋಕೆ ಅಂತ ಬರುವ ಮಾತು ಬಾರದ, ಕಿವಿ ಕೇಳದ ಕಳ್ಳ, ಅದಾಗಲೇ ಆ ಮನೆಯೊಳಗಿರೋ ಮತ್ತೊಬ್ಬ ‘ಅಂಧ’ ಕಳ್ಳ. ಈ ಇಬ್ಬರ ನಡುವಿನ ಜುಗಲ್ ಬಂದಿ ಮಧ್ಯೆ ಕಾಣಸಿಗೋ ಹುಡುಗ ಹುಡುಗಿಯ ಲವ್ ಸ್ಟೋರಿ, ಅಮ್ಮನಾಗೋ ಹಂಬಲದಲ್ಲಿ ನೋವಲ್ಲೇ ದಿನದೂಡುವ ತಾಯಿಯೊಬ್ಬಳ ಕಣ್ಣೀರಧಾರೆ. ಇದರ ಮಧ್ಯೆ ಬರುವ ಒಂದಷ್ಟು ತರಹೇವಾರಿ ಪಾತ್ರಗಳು.

ಇಷ್ಟಕ್ಕೂ ಆ ಬೆಲೆಬಾಳುವ ಕ್ರಿಸ್ಟಲ್ ಯಾರ ಕೈ ಸೇರುತ್ತೆ. ಆ ಯುವ ಪ್ರೇಮಿಗಳು ಒಂದಾಗುತ್ತಾರಾ? ಆ ತಾಯಿ ಆಸೆ ಈಡೇರುತ್ತಾ? ಈ ಕುತೂಹಲ ಇದ್ದರೆ ಒಮ್ಮೆ ಜುಗಲ್ ಬಂದಿ ನೋಡಲ್ಲಡ್ಡಿಯಿಲ್ಲ.

ಯಾರ ನಟನೆ ಹೇಗೆ?

ಇಲ್ಲಿ ಮಗುವಿಗಾಗಿ ಹಂಬಲಿಸುವ ತಾಯಿಯಾಗಿ ಮಾನಸಿ ಸುಧೀರ್ ಗಮನ ಸೆಳೆದರೆ, ಅಂಧನಾಗಿ ಯಶ್ ಶೆಟ್ಟಿ ಇಷ್ಟವಾಗುತ್ತಾರೆ. ಕಿವಿ ಕೇಳದ, ಮಾತು ಬಾರದ ಕಳ್ಳನಾಗಿ ಸಂತೋಷ್ ಆಶ್ರಯ್ ಸ್ಕೋರ್ ಮಾಡಿದ್ದಾರೆ. ಅರ್ಚನಾ ಕೊಟ್ಟಿಗೆ, ಅಶ್ವಿನ್, ಅರವಿಂದ್ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಬರುವ ಪಾತ್ರಗಳನ್ನು ಕಡೆಗಣಿಸುವಂತಿಲ್ಲ.

ಪ್ರದ್ಯೋತ್ನ ಸಂಗೀತದ ಎರಡು ಹಾಡು ಗುನುಗುವಂತಿದೆ. ಹಿನ್ನೆಲೆ ಸಂಗೀತಕ್ಕಿನ್ನು ಧಮ್ ಇರಬೇಕಿತ್ತು. ಕ್ಯಾಮರಾ ಕೆಲಸ ಜುಗಲ್ ಬಂದಿ ಅಂದ ಹೆಚ್ಚಿಸಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಮಹಿಳಾ ಆಯೋಗದಿಂದ ನೊಟೀಸ್

15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಚಿಕಿತ್ಸೆ ಫಲಿಸದೇ ನಟ, ಅಧಿಕಾರಿ ಕೆ.ಶಿವರಾಮ್ ನಿಧನ: ಗಣ್ಯರ ಸಂತಾಪ

- Advertisement -

Latest Posts

Don't Miss