ದೂರ್ವಾಸ ಮುನಿ ಅಂದ್ರೆನೇ ಸಿಟ್ಟಿನ ಋಷಿಮುನಿ ಅನ್ನೋದು ಪೌರಾಣಿಕ ಕಥೆಯನ್ನ ಕೇಳಿದವರಿಗೆ ಮತ್ತು ಓದಿದವರಿಗೆ ಗೊತ್ತು. ನಾವು ಇಂದು ದೂರ್ವಾಸ ಮುನಿಗಳು ತಮ್ಮ 60 ಸಾವಿರ ಶಿಷ್ಯರೊಂದಿಗೆ ಅಯೋಧ್ಯೆಗೆ ಹೋದ ಕಥೆಯನ್ನ ಹೇಳಲಿದ್ದೇವೆ.
ಒಮ್ಮೆ ದೂರ್ವಾಸ ಮುನಿಗಳು ತಮ್ಮ 60 ಸಾವಿರ ಶಿಷ್ಯರೊಂದಿಗೆ, ರಾಮನನ್ನು ನೋಡಲು ಅಯೋಧ್ಯೆಗೆ ಹೋರಟರು. ಆಗ ಅವರಿಗೊಂದು ಯೋಚನೆ ಬಂತು. ಸಾಕ್ಷಾತ್ ಶ್ರೀಮನ್ನಾರಾಯಣನೇ, ರಾಮನ ರೂಪ ಧರಿಸಿದ್ದಾರೆ. ಮತ್ತು ಈ ವಿಷಯ ನನಗಷ್ಟೇ ಗೊತ್ತು. ಆದರೆ ಪೂರ್ತಿ ಲೋಕಕ್ಕೆ ಅವರ ಶಕ್ತಿಯ ಬಗ್ಗೆ ನಾನಿವತ್ತು ತೋರ್ಪಡಿಸುತ್ತೇನೆ ಎಂದು ಯೋಚಿಸಿ ಹೊರಟರು.
ದೂರ್ವಾಸ ಮುನಿಗಳು ಬರುತ್ತಿದ್ದಂತೆ, ಶ್ರೀರಾಮ ಬಂದು ಅವರನ್ನ ಸ್ವಾಗತಿಸಿ, ಅರಮನೆಯೊಳಗೆ ಕರೆದೊಯ್ದ. ಅಲ್ಲಿ ದೂರ್ವಾಸ ಮುನಿಗಳು ಹೀಗೆಂದರು. ನಾನು ಒಂದು ಸಾವಿರ ವರ್ಷಗಳ ಉಪವಾಸ ಮುಗಿಸಿ, ನನ್ನ ಶಿಷ್ಯರೊಂದಿಗೆ ಇಲ್ಲಿಗೆ ಬಂದಿದ್ದೇನೆ. ಹಾಗಾಗಿ ನೀವು ನನಗೂ ನನ್ನ ಶಿಷ್ಯರಿಗೂ ಭೋಜನ ಏರ್ಪಡಿಸಬೇಕು. ಆದರೆ ನಾನು ಸೂಚಿಸುವ ಮುಹೂರ್ತದಲ್ಲಿ ಈ ಅಡುಗೆ ತಯಾರಿಸಬೇಕು. ಮತ್ತು ನೀರು, ಹಸು ಮತ್ತು ಅಗ್ನಿಯ ಸ್ಪರ್ಶವಿಲ್ಲದೇ, ಈ ಭೋಜನ ಮಾಡಬೇಕು ಎನ್ನುತ್ತಾರೆ.
ಅಲ್ಲದೇ, ನನ್ನ ಊಟದಲ್ಲಿ ಭಕ್ಷ್ಯ ಭೋಜನವಿರಬೇಕು. ಮತ್ತು ನಾನೀಗ ಶಿವಪೂಜೆ ಮಾಡುತ್ತೇನೆ. ಅದಕ್ಕಾಗಿ ನನಗೆ ವ್ಯವಸ್ಥೆ ಮಾಡಿಕೊಡಬೇಕು. ಶಿವನಿಗೆ ಅರ್ಪಿಸಲು ಹೂವನ್ನು ತರಿಸಬೇಕು. ಆ ಹೂವನ್ನು ಇದುವರೆಗೂ ಯಾರೂ ನೋಡಿರಬಾರದು . ಮತ್ತು ನಿನ್ನಿಂದ ಈ ಕೆಲಸವೆಲ್ಲ ಮಾಡಲಾಗದಿದ್ದಲ್ಲಿ, ಸಮಯ ವ್ಯರ್ಥ ಮಾಡದೇ, ನೀನು ಈಗಲೇ ಇದೆಲ್ಲ ಆಗಲ್ಲವೆಂದು ಹೇಳಬೇಕು ಎನ್ನುತ್ತಾರೆ.
ದೂರ್ವಾಸರ ಮಾತು ಕೇಳಿ ಶ್ರೀರಾಮ ನಸುನಕ್ಕ. ಮತ್ತು ಖಂಡಿತವಾಗಿಯೂ ನೀವು ಹೇಳಿದ ಎಲ್ಲ ಕೆಲಸ ಮಾಡುತ್ತೇನೆ ಎಂದ. ಅದಕ್ಕೆ ದೂರ್ವಾಸರು, ಸರಿ ಹಾಗಾದರೆ, ನಾನು ಸರಯೂ ನದಿಗೆ ಹೋಗಿ, ಸ್ನಾನ ಮಾಡಿ ಬರುತ್ತೇನೆ. ಅಲ್ಲಿಯವರೆಗೂ ಪೂಜೆಗೆ ತಯಾರಿ ಮಾಡು ಎಂದು ಹೇಳಿ ಹೊರಡುತ್ತಾರೆ. ಹಾಗಾದ್ರೆ ಶ್ರೀರಾಮ ದೂರ್ವಾಸರು ಹೇಳಿದ ಹಾಗೆ, ಜಲ, ಅಗ್ನಿ ಮತ್ತು ಹಸುವಿನ ಸಹಾಯವಿಲ್ಲದೇ ಮಾಡಿದ ಭೋಜನ ನೀಡುತ್ತಾನಾ..? ಶಿವನಿಗೆ ಬೇಕಾದ ಹೂವನ್ನು ತಂದು ಕೊಡುತ್ತಾನಾ..? ಈ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ..