Spiritual Stories:ಹಿಂದಿನ ಕಾಲದಲ್ಲಿ ಪತಿಯಾಗಲಿ ಅಥವಾ ಯಾರೇ ಆಗಲಿ, ಬಡಿದರೂ, ಹೊಡಿದರೂ, ಬೈದರೂ ಹೆಣ್ಣು ಮಕ್ಕಳು ಹೊಂದಿಕೊಂಡು ಹೋಗುತ್ತಿದ್ದರು. ಮಕ್ಕಳು ಕೂಡ ತಂದೆ ತಾಯಿ ಬೈದರೆ, ಬಡಿದರೂ ನಮ್ಮವರು ಎಂದುಕೊಂಡು ಮುನ್ನಡೆಯುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಸ್ವಲ್ಪ ಮಾತಿನಲ್ಲಿ ತಪ್ಪಾದರೂ, ಜನ ಮನೆಬಿಟ್ಟು ಹೋಗುವ ಮಟ್ಟಿಗೆ ಬೆಳೆದಿದ್ದಾರೆ. ಹಾಗಂತ, ಹೊಡೆದರೂ ಬಡೆದರೂ ಸಹಿಸಿಕೊಂಡು ಇರಬೇಕು ಅಂತಾ ನಾವು ಹೇಳುತ್ತಿಲ್ಲ. ಆದರೆ ಸಣ್ಣ- ಪುಟ್ಟ ಮಾತಿಗೂ ಮುನಿಸಿಕೊಂಡು, ಆ ಜಗಳವೇ ದೊಡ್ಡದಾಗಿ, ಸಂಬಂಧ ಮುರಿದು ಹೋಗುತ್ತಿದೆ. ಹಾಗಾದ್ರೆ ಸಂಬಂಧ ಗಟ್ಟಿಯಾಗಬೇಕು ಅಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಕೆಲಸ, ತಾಳ್ಮೆ ಮತ್ತು ಪ್ರೀತಿಯಿಂದ ಇರುವುದು. ಇವೆರಡು ಸಂಬಂಧವನ್ನು ಗಟ್ಟಿ ಮಾಡುತ್ತದೆ. ಪತಿ ಸಿಟ್ಟಿನಲ್ಲಿರುವಾಗ ಪತ್ನಿ ತಾಳ್ಮೆಯಿಂದ ಇರಬೇಕು. ಪತ್ನಿ ಸಿಟ್ಟಿನಲ್ಲಿ ಮಾತನಾಡುವಾಗ ಪತಿ ತಾಳ್ಮೆಯಿಂದ ಇರಬೇಕು. ಈ ರೀತಿಯ ತಾಳ್ಮೆಯಿಂದ ಪ್ರೀತಿ ಉಳಿಯುತ್ತದೆ. ಇಬ್ಬರೂ ಸಿಟ್ಟಾದರೆ, ಆ ಜಗಳ ಸಂಬಂಧ ಮುರಿಯುವ ತನಕ ಹೋಗಬಹುದು.
ಎರಡನೇಯ ಕೆಲಸ, ಮಾತಿನ ಮೇಲೆ ಸದಾ ನಿಗಾ ಇರಲಿ. ಕೆಲವೊಮ್ಮೆ ಬಾಯಿ ತಪ್ಪಿ ಬರುವ ಕಠೋರ ಮಾತಿನಿಂದಲೇ ಸಂಬಂಧ ಹಾಳಾಗುತ್ತದೆ. ಕೆಲವರು ಅಂಥ ಮಾತನ್ನು ಕಡೆಗಣಿಸಿದರೆ, ಇನ್ನು ಕೆಲವರು ಅಂಥ ಮಾತುಗಳನ್ನು ನೆನಪಿಟ್ಟುಕೊಂಡು, ಕೊಂಕು ಮಾತನಾಡುತ್ತಾರೆ. ಹಾಗಾಗಿ ಮಾತನಾಡುವಾಗ ನಿಗಾ ಇರಿಸಿ. ಇನ್ನು ರಫ್ ಆಗಿ ಮಾತನಾಡುವ ಬದಲು, ಮಾಧುರ್ಯದಿಂದ ಮಾತನಾಡಿ.
ಮೂರನೇಯ ಕೆಲಸ, ಪರಸ್ಪರ ಗೌರವವಿರಲಿ. ಮನೆಗೆ ಯಾರಾದರೂ ಬಂದಾಗ, ಅಥವಾ ನೀವು ಹೊರಗಡೆ ಹೋದಾಗ, ಅಥವಾ ಸಂಬಂಧಿಕರ ಎದುರಿಗೆ ಪತಿ ಅಥವಾ ಪತ್ನಿಯನ್ನು ಬೈಯ್ಯಬೇಡಿ. ಹೀಯಾಳಿಸಬೇಡಿ. ಮನೆಯಲ್ಲಿ ಮಾಡುವ ತಪ್ಪುಗಳ ಬಗ್ಗೆ ಹಂಗಿಸಬೇಡಿ. ಇದೇ ನಿಮ್ಮಿಬ್ಬರ ಮಧ್ಯೆ ದ್ವೇಷ ಹುಟ್ಟಲು ಸಾಕಾಗಬಹುದು.
ನಾಲ್ಕನೇಯ ಕೆಲಸ, ಜಗಳದ ಬಗ್ಗೆ ಮೂರನೇಯವರಿಗೆ ಹೇಳಬೇಡಿ. ಪತಿ ಪತ್ನಿ ಮಧ್ಯೆ ನಡೆಯುವ ಜಗಳ, ನಾಲ್ಕು ಗೋಡೆಯ ನಡುವೆ ಇರಬೇಕು. ಅದರ ಬಗ್ಗೆ ಮೂರನೇಯವರಿಗೆ ಗೊತ್ತಾಗಬಾರದು. ಸ್ನೇಹಿತರು ಸಂಬಂಧಿಕರು, ತವರು ಮನೆಯವರು, ಪತಿಯ ಮನೆಯವರು ಯಾರಿಗೂ ನಿಮ್ಮ ಜಗಳದ ಬಗ್ಗೆ ಡಂಗುರ ಸಾರಬೇಡಿ. ಹಾಗೆ ಮಾಡಿದಾಗಲೇ, ನಿಮ್ಮ ಬಗ್ಗೆ ಜೀವನ ಸಂಗಾತಿಗೆ ತುಚ್ಛ ಭಾವನೆ ಬರುತ್ತದೆ.
ಐದನೇಯ ಕೆಲಸ, ಅನುಕೂಲಕ್ಕಾಗಿ ಎಂದಿಗೂ ಪ್ರೀತಿಸಬೇಡಿ. ಪತ್ನಿಯಾದವಳು ತನ್ನ ಬಟ್ಟೆ ತೊಳೆಯಬೇಕು. ಮನೆ ಚೆಂದವಾಗಿ ಇಟ್ಟುಕೊಳ್ಳಬೇಕು. ತಂದೆ ತಾಯಿಯ ಚಾಕರಿ ಮಾಡಬೇಕು. ಅಡುಗೆ ಮಾಡಿ ಹಾಕಬೇಕು ಎಂಬ ದುರಾಸೆಯೊಂದಿಗೆ ಎಂದಿಗೂ ವಿವಾಹವಾಗಬೇಡಿ. ಪತ್ನಿಯನ್ನು ಪ್ರೀತಿಸಿ, ಆಕೆಯನ್ನು ಕಾಳಜಿ ಮಾಡಿ. ಆಗ ಆಕೆ ಇವೆಲ್ಲವನ್ನೂ ನೀವು ಹೆೇಳದೆಯೇ ನಿಭಾಯಿಸುತ್ತಾಳೆ. ಇಂದಿನ ಪೀಳಿಗೆಯಲ್ಲಿ ಎಷ್ಟೋ ಹೆಣ್ಣು ಮಕ್ಕಳು, ಮನೆಗೆಲಸದ ಒತ್ತಡದಿಂದಲೇ, ಪತಿಯನ್ನು ತೊರೆದು ಹೋಗುತ್ತಿದ್ದಾರೆ.
ಇನ್ನು ಪತ್ನಿಯಾದವಳು ಪತಿ ತನಗೆ ರಾಶಿ ರಾಶಿ ಗಿಫ್ಟ್ ಕೊಡಬೇಕು. ಸಂಬಳವನ್ನೆಲ್ಲ ತನಗೇ ತಂದುಕೊಡಬೇಕು. ಕೇಳಿದಾಗೆಲ್ಲ ತಿರುಗಾಡಲು ಕರೆದುಕೊಂಡು ಹೋಗಬೇಕು. ಫ್ರೆಂಡ್ಸ್‌ನಿಂದ ದೂರವಿರಬೇಕು ಎಂದೆಲ್ಲ ಬಯಸುತ್ತಾರೆ. ಇದು ತಪ್ಪು, ನೀವು ಪತಿಯನ್ನು ಪ್ರೀತಿಸಿದರೆ, ಅವರು ನೀವೇನೂ ಕೇಳದೆಯೇ ನಿಮಗೆಲ್ಲ ನೀಡುತ್ತಾರೆ. ಇನ್ನು ಪತಿಗೂ ಸ್ವಲ್ಪ ಸ್ವಾತಂತ್ರ್ಯ ಬೇಕಿರುವ ಕಾರಣ, ಗೆಳೆಯರ ಜೊತೆ, ಕೆಲವೊಮ್ಮೆ ಬೆರೆಯಲು ಬಿಡಬಹುದು. ಹೀಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡರೆ, ಜೀವನ ಉತ್ತಮವಾಗಿರುತ್ತದೆ.

