Biography: ಚಿಕ್ಕವರಿದ್ದಾಗ ಈ ವ್ಯಕ್ತಿ ಸೈಕಲ್‌ನಲ್ಲಿ ಮನೆ ಮನೆಗೆ ಹೋಗಿ, ಪೇಪರ್ ಹಾಕುತ್ತಿದ್ದರು. ಚಿಕ್ಕಂದಿನಲ್ಲೇ ಜೀವನ ಪಾಠವನ್ನು ಅರಿತು ಬಾಳಿದವರು. ತಮ್ಮ ಜೀವನಾನುಭವವನ್ನು ಜನರಿಗೆ ಹಂಚಿದವರು. ವೃತ್ತಿಯಲ್ಲಿ ಲೆಕ್ಚರರ್ ಆಗಿದ್ದ ಇವರು, ನಮ್ಮ ದೇಶದ ನೆಚ್ಚಿನ ರಾಷ್ಟ್ರಪತಿಯಾಗಿದ್ದರು. ಇವರು, ಹಾರ್ಟ್ ಅಟ್ಯಾಕ್ ಆಗಿ ಮೃತಪಟ್ಟಿದ್ದರು. ಅದು ಯಾವ ಸಂದರ್ಭದಲ್ಲಿ ಎಂದರೆ, ವಿದ್ಯಾರ್ಥಿಗಳಿಗೆ ಪಾಠ ಮಾಡುವ ಸಂದರ್ಭದಲ್ಲಿ. ಅದು ತಮ್ಮ ನೆಚ್ಚಿನ ಕೆಲಸ ಮಾಡುವ ಸಂದರ್ಭದಲ್ಲಿ ಹೃದಯಾಘಾತವಾಗಿತ್ತು. ಹಾಗಾದರೆ ಎಲ್ಲರ ನೆಚ್ಚಿನ ರಾಷ್ಟ್ರಪತಿಯ ಕಥೆ ಓದೋಣ ಬನ್ನಿ..
ಇಲ್ಲಿಯವರೆಗೆ ಆಡಳಿತ ನಡೆಸಿದ ರಾಷ್ಟ್ರಪತಿಗಳಲ್ಲಿ, ನಿಮ್ಮ ನೆಚ್ಚಿನ ರಾಷ್ಟ್ರಪತಿ ಯಾರು ಎಂದು ಯಾರಿಗಾದರೂ ಕೇಳಿದರೆ, ಹಲವರು ಕೊಡುವ ಉತ್ತಮ. ಎ.ಪಿ.ಜೆ ಅಬ್ದುಲ್ ಕಲಾಂ. ಅವುಲ್ ಫಕೀರ್ ಜೈನುಲಬ್ದಿನ್ ಅಬ್ದುಲ್ ಕಲಾಂ ಅನ್ನೋದು ಅವರ ಪೂರ್ತಿ ಹೆಸರು. ತಮಿಳುನಾಡಿನ ರಾಮೇಶ್ವರಂನಲ್ಲಿರುವ ಇಸ್ಲಾಂ ಕುಟುಂಬದಲ್ಲಿ ಜನಿಸಿದ ಕಲಾಂ ಅವರು, ಸರ್ವಧರ್ಮ ಸಮವೆಂದು ಬೆಳೆದವರು. ಅದಕ್ಕಾಗಿಯೇ ಅವರು ಹಲವರ ನೆಚ್ಚಿನ ರಾಷ್ಟ್ರಪತಿಯಾಗಿದ್ದರು.
ಅಬ್ದುಲ್ ಕಲಾಂ ತಂದೆಗೆ ಮೂವರು ಗಂಡು ಮಕ್ಕಳು. ಅವರ ಬಳಿ ಒಂದು ಸಣ್ಣ ದೋಣಿ ಇತ್ತು. ಆ ದೋಣಿ ಬಳಸಿ, ರಾಮೇಶ್ವರಂಗೆ ಬರುವ ಪ್ರವಾಸಿಗರನ್ನು ಒಂದು ದಡದಿಂದ ಇನ್ನೊಂದು ದಡಕ್ಕೆ ಸೇರಿಸುವ ಕೆಲಸವನ್ನು ಕಲಾಂ ತಂದೆ ಮಾಡುತ್ತಿದ್ದರು. ಕಡಿಮೆ ಸಂಬಳದಲ್ಲಿ ಕುಟುಂಬವನ್ನು ಸಾಕುವ ಪರಿಸ್ಥಿತಿ ಇತ್ತು. ಆದರೆ ಮಕ್ಕಳ ಶಾಲೆಗೆ ಫೀಸ್ ಮಾತ್ರ, ಕರೆಕ್ಟ್ ಆಗಿ ಕಟ್ಟುತ್ತಿದ್ದರು.
ಕಲಾಂ ಅವರು ಅಷ್ಟೇನು ಬುದ್ಧಿವಂತರಲ್ಲದಿದ್ದರೂ, ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವಲ್ಲಿ ಅವರಿಗೆ ಹೆಚ್ಚು ಆಸಕ್ತಿ ಇತ್ತು. ಕಲಾಂ ಅವರು ಚಿಕ್ಕವರಿದ್ದಾಗ, ಅವರ ಗಣಿತ ಶಿಕ್ಷಕರು, ಯಾರು ಬೆಳಗ್ಗಿನ ಜಾವ 4 ಗಂಟೆಗೆ, ಸ್ನಾನವನ್ನು ಮುಗಿಸಿ, ನೀಟ್ ಆಗಿ ನನ್ನ ಮನೆಗೆ ಟ್ಯೂಶನ್‌ಗೆ ಬರುತ್ತಾರೋ, ಅವರಿಗೆ ನಾನು ಫ್ರೀಯಾಗಿ ಗಣಿತ ಹೇಳಿಕೊಡುತ್ತೇನೆ ಎಂದು ಹೇಳುತ್ತಾರೆ.
ಶಿಕ್ಷಕರ ಮನೆ ಕಲಾಂ ಅವರ ಮನೆಯಿಂದ ತುಂಬಾ ದೂರವಿತ್ತು. ಆದರೂ ಕಲಾಂ ಅವರು ಬೆಳಗ್ಗಿನ ಜಾವ 3 ಗಂಟೆಗೆ ಎದ್ದು, ಸ್ನಾನಾದಿಗಳನ್ನು ಮಾಡಿ, ಶಿಕ್ಷಕರ ಮನೆಗೆ ಗಣಿತ ಕಲಿಯಲು ಹೋಗುತ್ತಿದ್ದರು. ಬಳಿಕ ಮನೆಗೆ ಬಂದು ನಮಾಜ್ ಮಾಡಿ, ಮನೆ ಮನೆಗೆ ಪೇಪರ್ ಹಂಚಿ, ಬಳಿಕ ಶಾಲೆಗೆ ಹೋಗುತ್ತಿದ್ದರು.
ಒಮ್ಮೆ ಅಬ್ದುಲ್ ಕಲಾಂ, ರಾಮೇಶ್ವರದ ಮುಖ್ಯ ಪುರೋಹಿತರ ಮಗನ ಜೊತೆ, ಕ್ಲಾಸಿನ ಮೊದಲ ಬೆಂಚ್‌ನಲ್ಲಿ ಕುಳಿತುಕೊಂಡಿದ್ದರು. ಇದನ್ನು ನೋಡಿ, ಕ್ಲಾಸಿಗೆ ಬಂದ ಶಿಕ್ಷಕರಿಗೆ ಸಿಟ್ಟು ಬಂದಿತ್ತು. ಅವರು ಕಲಾಂರನ್ನು ಮೊದಲ ಬೆಂಚ್‌ನಿಂದ ಎಬ್ಬಿಸಿ ಲಾಸ್ಟ್ ಬೆಂಚ್‌ಗೆ ಕಳುಹಿಸಿದರು. ಏಕೆಂದರೆ, ಆ ಬಾಲಕ ಬ್ರಾಹ್ಮಣ ಅರ್ಚಕರ ಮಗ, ಮತ್ತು ಕಲಾಂ ಮುಸ್ಲಿಂಮರು ಎಂಬ ಕಾರಣಕ್ಕೆ, ಶಿಕ್ಷಕರೇ ಜಾತಿ ಬೇಧವೆಂದು ಬೈದು, ಉಳಿದ ಮಕ್ಕಳ ಎದುರು ಕಲಾಂ ಅವರಿಗೆ ಅವಮಾನ ಮಾಡಿದ್ದರು.
ಆಗ ಕಲಾಂ ಅವರು ಹಿಂದಿನ ಬೆಂಚ್‌ನಲ್ಲೇ ಕುಳಿತು, ಭವಿಷ್ಯದಲ್ಲಿ ಉನ್ನತ ಮಟ್ಟಕ್ಕೇರುತ್ತೇನೆಂದು ಅಂದೇ ಪಣತೊಟ್ಟಿದ್ದರು. ಮುಂದೊಂದು ದಿನ ಕಲಾಂ ಅವರು ರಾಷ್ಟ್ರದ ರಾಷ್ಟ್ರಪತಿಯಾದಾಗ, ಇದೇ ಮಾತನ್ನಾಡಿದ್ದರು. ಕ್ಲಾಸಿನ ಅತ್ಯುತ್ತಮ ಬುದ್ಧಿವಂತಿಕೆ ನಿಮಗೆ ಕ್ಲಾಸಿನ ಲಾಸ್ಟ್ ಬೆಂಚ್‌ನಲ್ಲಿಯೂ ಸಿಗಬಹುದು ಎಂದಿದ್ದರು. ಕಲಾಂ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಮುಂದಿನನ ಭಾಗದಲ್ಲಿ ತಿಳಿಯೋಣ.