ಜೀವನ ನಮಗೆ ಹೇಗೆಲ್ಲ ಪಾಠಕಲಿಸುತ್ತದೆ ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹಲವು ಕಥೆಗಳನ್ನ ಹೇಳಿದ್ದೇವೆ. ಇಂದು ಕೂಡ ನಾವು ದುರಾಸೆ ಮಾಡಿದಾಗ ಏನಾಗುತ್ತದೆ ಅನ್ನೋ ಬಗ್ಗೆ ಕಥೆಯನ್ನ ಹೇಳಲಿದ್ದೇವೆ.
ಒಂದೂರಲ್ಲಿ ಓರ್ವ ಪಂಡಿತನಿದ್ದ. ಅವನ ಬಳಿ ಹೆಚ್ಚು ಹಣವಿರಲಿಲ್ಲ. ಆದರೆ ಅವನು ಶಿವಭಕ್ತನಾಗಿದ್ದ. ಪ್ರತಿದಿನ ತಪ್ಪದೇ ಶಿವನ ಪೂಜೆ ಮಾಡುತ್ತಿದ್ದ. ಮನೆ ಮನೆಗೆ ತೆರಳಿ, ಅವರು ಕೊಟ್ಟಿದ್ದನ್ನ ಮನೆಗೆ ತಂದು ಪತ್ನಿ- ಮಗನ ಜೊತೆ ಹಂಚಿ ತಿನ್ನುತ್ತಿದ್ದ. ಆದರೆ ಅವನ ಪತ್ನಿಗೆ ಆಸೆ ಹೆಚ್ಚಾಗಿತ್ತು. ಆಗ ಆಕೆ, ನೀವು ಹೀಗೆ ಬೇಡಿ ತರುತ್ತಿರುವುದು ನಮಗೆಲ್ಲೂ ಸಾಲುತ್ತಿಲ್ಲ. ನೀವು ಬರೀ ಶಿವಪೂಜೆ ಮಾಡಿಕೊಂಡು, ಬೇಡಿ ತಂದರೆ, ಜೀವನ ಪೂರ್ತಿ ಹೀಗೆ ಕೊಂಚ ಕೊಂಚ ತಿಂದೇ ಸಾಯಬೇಕಾಗುತ್ತದೆ. ನಿಮಗೆ ಹೇಗೂ ಹಲವಾರು ಕಥೆಗಳು ಗೊತ್ತು. ಪಟಟ್ಟಣಕ್ಕೆ ಹೋಗಿ, ಅಲ್ಲಿ ದೇವರ ಕಥನಗಳನ್ನ ಜನರಿಗೆ ಹೇಳಿ. ಅಲ್ಲಿನ ಜನ ಶ್ರೀಮಂತರಿರುತ್ತಾರೆ. ಅವರು ರಾಶಿ ರಾಶಿ ಹಣ ನೀಡುತ್ತಾರೆ. ಅದನ್ನು ತಂದು, ನಮಗೆ ಬೇಕಾದ್ದನ್ನ ಮಾಡಿ ತಿನ್ನೋಣ. ಹೊಟ್ಟೆ ತುಂಬ ಉಂಡು ಸಂತೋಷವಾಗಿರೋಣ. ಅಲ್ಲದೇ, ಉಳಿದ ಹಣದಲ್ಲಿ ಮನೆಗೆ ಬೇಕಾದ ಎಲ್ಲ ವಸ್ತುಗಳನ್ನ ಖರೀದಿಸೋಣ. ಶ್ರೀಮಂತರಾಗೋಣ ಎನ್ನುತ್ತಾಳೆ.
ಪತ್ನಿಯ ಮಾತೂ ಸರಿ ಎನ್ನಿಸಿತು ಆ ಪಂಡಿತನಿಗೆ. ಹಾಗಾಗಿ ಆತ, ಮರುದಿನ ಸ್ನಾನಾದಿಗಳನ್ನ ಮಾಡಿ, ಶಿವಪೂಜೆ ಮಾಡಿ, ಪಟ್ಟಣಕ್ಕೆ ಹೊರಟ. ಆದರೆ ಅಲ್ಯಾರೂ ಇವರ ಕಥೆ ಕೇಳಲು ತಯಾರಿರಲಿಲ್ಲ. ಎಲ್ಲರೂ ಕೆಲಸಕ್ಕೆ ಹೊರಡುವ ಭರದಲ್ಲಿದ್ದರು. ಅವರೆಲ್ಲ ಇವನ ಬಳಿ ತಿರುಗಿಯೂ ನೋಡಲಿಲ್ಲ. ಆಗ ಪಂಡಿತನಿಗೆ ಚಿಂತೆ ಶುರುವಾಯಿತು. ನಾನು ಖಾಲಿ ಕೈಯಲ್ಲಿ ಹೋದರೆ, ಪತ್ನಿ- ಮಗನಿಗೆ ಬೇಸರವಾಗುತ್ತದೆ. ಹೇಗೂ ಇಂದು ಪಟ್ಟಣಕ್ಕೆ ಬಂದಿದ್ದೇನೆ. ಇಲ್ಲೇ ಕಟ್ಟೆಯ ಮೇಲೆ ಕುಳಿತು, ಸುಮ್ಮನೆ ಕಥೆ ಹೇಳೋಣ. ಕರುಣೆ ಇದ್ದವರು ಒಂದೆರಡು ಪೈಸೆ ಹಾಕಿ ಹೋದಾರು ಎಂದು ಯೋಚಿಸಿ. ಅಲ್ಲೇ ಇದ್ದ ಆಲದ ಮರದ ಕೆಳಗೆ ಕಟ್ಟೆ ಮೇಲೆ ಕುಳಿತು ಪ್ರವಚನ ಶುರು ಮಾಡಿದ.
ಪ್ರವಚನ ಮುಗಿದ ಬಳಿಕ, ಆ ಕಟ್ಟೆಯ ಬದಿಯಿಂದ ದೊಡ್ಡ ಸರ್ಪವೊಂದು ಬಂತು. ಸರ್ಪವನ್ನು ನೋಡಿ ಪಂಡಿತನಿಗೆ ಹೆದರಿಕೆಯಾಯಿತು. ಆದರೂ ಅವನು ದೂರದಲ್ಲಿ ನಿಂತು ಆ ಸರ್ಪವನ್ನು ನೋಡುತ್ತಿದ್ದ. ಆ ಸರ್ಪ ತನ್ನ ಬಳಿ ಇದ್ದ ಚಿನ್ನದ ನಾಣ್ಯವನ್ನುಅವನ ಬಳಿ ಬಿಸಾಡಿತು. ಮತ್ತು ಇದು ನಿನ್ನ ಪ್ರವಚನ ಕೇಳಿ ನನಗೆ ಸಂತೋಷವಾಗಿದ್ದಕ್ಕೆ, ನಿನಗೆ ಕೊಡುತ್ತಿರುವ ಉಡುಗೊರೆ. ನೀನು ಪ್ರತಿದಿನ ಹೀಗೆ ಬಂದು, ಪ್ರವಚನ ಹೇಳು. ನಾನು ಪ್ರತಿದಿನ ನಿನಗೆ ಚಿನ್ನದ ನಾಣ್ಯ ಕೊಡುತ್ತೇನೆ ಎಂದು ಹೇಳುತ್ತದೆ. ಅದಕ್ಕೆ ಹೂ ಆಗಲಿ ಎಂದು ಉತ್ತರಿಸಿದ ಪಂಡಿತ ಖುಷಿ, ಖುಷಿಯಾಗಿ ಮನೆಗೆ ಹೋಗುತ್ತಾನೆ. ಇದರ ಮುಂದುವರಿದ ಕಥೆಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ..