Thursday, November 13, 2025

Latest Posts

ಪತ್ನಿಯ ದುರಾಸೆಗೆ ಮಗನನ್ನ ಕಳೆದುಕೊಂಡ ಪಂಡಿತನ ಕಥೆ.. ಭಾಗ 2

- Advertisement -

ಇದರ ಮೊದಲ ಭಾಗದಲ್ಲಿ ನಾವು, ಪಂಡಿತ ಪಟ್ಟಣಕ್ಕೆ ಹೋಗಿ, ಆಲದ ಮರದ ಕೆಳಗೆ ಕುಳಿತು, ಪ್ರವಚನ ಹೇಳುತ್ತಾನೆ. ಅದನ್ನು ಮೆಚ್ಚಿದ ಸರ್ಪ, ಅವನಿಗೆ ಪ್ರತಿದಿನ ಚಿನ್ನದ ನಾಣ್ಯ ಕೊಡುತ್ತಿತ್ತು. ಇದಾದ ಬಳಿಕ ಏನಾಯಿತು..? ಪತ್ನಿಯ ದುರಾಸೆಗೆ ಆ ಪಂಡಿತ ಹೇಗೆ ಬೆಲೆ ತೆರಬೇಕಾಯಿತು ಅಂತಾ ತಿಳಿಯೋಣ ಬನ್ನಿ..

ಸರ್ಪ ಕೊಟ್ಟ ನಾಣ್ಯವನ್ನ ಪಂಡಿತ ಪತ್ನಿಗೆ ತಂದು ಕೊಡುತ್ತಾನೆ. ಅವರೆಲ್ಲ ಅಂದು ಖುಷಿಯಾಗಿ ಉಂಡು ಮಲಗುತ್ತಾರೆ. ಪ್ರತಿದಿನ ಪಂಡಿತ ಕಟ್ಟೆಯ ಮೇಲೆ ಕುಳಿತು ಪ್ರವಚನ ಹೇಳಿ, ನಾಣ್ಯ ಪಡೆಯುತ್ತಾನೆ. ಹೀಗೆ ಮಾಡುತ್ತ ಮಾಡುತ್ತ, ಪಂಡಿತ ಶ್ರೀಮಂತನಾಗುತ್ತಾನೆ. ಇವನ ಶ್ರೀಮಂತಿಕೆ ಕಂಡು ಅಕ್ಕಪಕ್ಕದ ಮನೆಯವರು ಇವನ ಪತ್ನಿಯಲ್ಲಿ ಹೀಗೆ ಪ್ರಶ್ನಿಸುತ್ತಾರೆ. ಏನಾಶ್ಚರ್ಯ, ನೀವು ಇಷ್ಟು ಬೇಗ ಹೇಗೆ ಇಷ್ಟು ಶ್ರೀಮಂತರಾದಿರಿ..? ನಿಮ್ಮ ಪತಿ ಏನಾದರೂ ಮಾಡಬಾರದ ಕೆಲಸ ಮಾಡುತ್ತಾರೇನು..? ಎಂದು ಕೇಳುತ್ತಾರೆ. ಅದಕ್ಕೆ ಹಾಗೇನಿಲ್ಲ, ಅವರು ಪಟ್ಟಣಕ್ಕೆ ಹೋಗಿ, ಪ್ರವಚನ ಹೇಳಿ, ಹಣ ಸಂಪಾದಿಸುತ್ತಾರೆಂದು ಪತ್ನಿ ಹೇಳುತ್ತಾಳೆ.

ಆದರೂ ಆಕೆಗೆ ಕುತೂಹಲ ತಡೆಯಲಾಗುವುದಿಲ್ಲ. ಆಗ ಆಕೆ ಪಂಡಿತನ ಬಳಿ ಹೋಗಿ, ನೀವು ಪ್ರತಿದಿನ ಚಿನ್ನದ ನಾಣ್ಯವನ್ನ ಎಲ್ಲಿಂದ ತರುತ್ತೀರಿ. ಪಟ್ಟಣದಲ್ಲಿ ಅಷ್ಟೆಲ್ಲ ಜನ ನಿಮ್ಮ ಪ್ರವಚನ ಕೇಳುತ್ತಾರೆಯೇ..? ಅಥವಾ ಮಾಡಬಾರದ್ದು ಏನಾದರೂ ಮಾಡಿ ಹಣ ಸಂಪಾದಿಸುತ್ತೀರೋ..? ಎಂದು ಕೇಳುತ್ತಾಳೆ. ಅದಕ್ಕೆ ಉತ್ತರಿಸಿದ ಪಂಡಿತ, ತನಗೆ ಪ್ರತಿದಿನ ಸರ್ಪ ಚಿನ್ನದ ನಾಣ್ಯ ಕೊಡುತ್ತದೆ ಎನ್ನುತ್ತಾನೆ. ಇದನ್ನು ಕೇಳಿದ ಪತ್ನಿಯ ಮನಸ್ಸಿನಲ್ಲಿ ದುರಾಸೆ ಮೂಡುತ್ತದೆ.

ಮರುದಿನ ಆಕೆ ಪಂಡಿತ ತಿನ್ನುವ ಆಹಾರಕ್ಕೆ ಮತ್ತಿನಪುಡಿ ಬೆರೆಸುತ್ತಾಳೆ. ಆ ಆಹಾರ ತಿಂದ ಪಂಡಿತ, ಎಚ್ಚರತಪ್ಪುತ್ತಾನೆ. ಆಗ ಆ ಮಹಿಳೆ ತನ್ನ ಮಗನನ್ನು ಕರೆದು, ನಿನ್ನ ಅಪ್ಪ ಪಟ್ಟಣದಲ್ಲಿ ಇರುವ ಆಲದ ಮರದ ಕೆಳಗೆ ಕುಳಿತು ಪ್ರವಚನ ಹೇಳುತ್ತಿದ್ದರು. ಮತ್ತು ಅಲ್ಲೇ ಇದ್ದ ಸರ್ಪ ಅವರಿಗೆ ಚಿನ್ನದ ನಾಣ್ಯ ಕೊಡುತ್ತಿತ್ತು. ಆದರೆ ಇಂದು ನಾನು ನಿನ್ನ ಅಪ್ಪ ಪ್ರವಚನ ಹೇಳಲು ಹೋಗದ ಹಾಗೆ ಮಾಡಿದ್ದೇನೆ. ನೀನು ಅಲ್ಲಿಗೆ ಹೋಗಿ ಪ್ರವಚನ ಮಾಡು. ಆ ಸರ್ಪ ನಿನಗೆ ಚಿನ್ನದ ನಾಣ್ಯ ಕೊಡಲು ಬರುತ್ತಿದ್ದಂತೆ, ಅದಕ್ಕೆ ಹೊಡೆದು ಸಾಯಿಸಿ. ಅದರ ಬಳಿ ಇರುವ ಎಲ್ಲ ಚಿನ್ನದ ನಾಣ್ಯ ತೆಗೆದುಕೊಂಡು ಬಾ ಎನ್ನುತ್ತಾಳೆ.

ಅದಕ್ಕೆ ಒಪ್ಪಿದ ಮಗ, ಪಂಡಿತನ ಚೀಲ ತೆಗೆದುಕೊಂಡು, ಆಲದ ಮರದ ಬಳಿ ತೆರಳುತ್ತಾನೆ, ಪ್ರವಚನ ಹೇಳುತ್ತಾನೆ. ಎದುರಿಗೆ ಬಂದ ಸರ್ಪ ಅವನಿಗೆ ನಾಣ್ಯ ಕೊಡುತ್ತದೆ. ನಾಣ್ಯ ಪಡೆದ ಬಾಲಕ, ಆ ಸರ್ಪಕ್ಕೆ ಕೋಲಿನಿಂದ ಪೆಟ್ಟು ಕೊಡುತ್ತಾನೆ. ಆ ಸರ್ಪದ ಬಾಲ ತುಂಡಾಗುತ್ತದೆ. ಕೋಪದಲ್ಲಿದ್ದ ಸರ್ಪ, ಬಾಲಕನನ್ನು ಕಚ್ಚಿ ಸಾಯಿಸುತ್ತದೆ. ಇತ್ತ ಎಚಚ್ಚರತಪ್ಪಿದ ಪಂಡಿತನಿಗೆ ಎಚ್ಚರವಾಗುತ್ತದೆ. ನೋಡಿದರೆ, ಎದುರಿಗೆ ತನ್ನ ಚೀಲವಿರುವುದಿಲ್ಲ. ಆತ ತಕ್ಷಣ, ಆ ಆಲದ ಮರದ ಬಳಿ ಹೋಗುತ್ತಾನೆ.

ಪುತ್ರನ ಹೆಣ ನೋಡುತ್ತಾನೆ. ಅಲ್ಲೇ ಇದ್ದ ಸರ್ಪ, ನಿನ್ನ ಮಗ ಚಿನ್ನದ ನಾಣ್ಯಕ್ಕಾಗಿ ಆಸೆ ಪಟ್ಟು ನನ್ನನ್ನೇ ಕೊಲ್ಲಲು ಬಂದ. ಹಾಗಾಗಿ ನಾನೇ ಅವನನ್ನು ಕಚ್ಚಿ ಸಾಯಿಸಿದೆ. ಇಷ್ಟು ದಿನ ನಿನ್ನ ಪ್ರವಚನವನ್ನು ಇಷ್ಟಪಟ್ಟು ಉಡುಗೊರೆ ನೀಡುತ್ತಿದ್ದ ನಾನು, ಇಂದು ನಿನಗೆ ಶಾಪ ನೀಡುತ್ತಿದ್ದೇನೆ. ನಿನ್ನ ಬಳಿ ಇರುವ ಸಂಪತ್ತೆಲ್ಲ ಕರಗಿ ಹೋಗಿ, ನೀನು ಮೊದಲಿನಂತೆ ಬಡವನಾಗು ಎಂದು ಹೇಳಿಹೋಗುತ್ತದೆ. ಪಪಂಡಿತ ಮಗನ ಶವವನ್ನು ಹೊತ್ತು ಮನೆಗೆ ಬರುತ್ತಾನೆ. ಅತೀ ಆಸೆ ಮಾಡಿದ ಪತ್ನಿ, ಶ್ರೀಮಂತಿಕೆಯ ಜೊತೆ ಮಗನನ್ನೂ ಕಳೆದುಕೊಂಡು ದುಃಖಿಸುವಂತಾಗುತ್ತದೆ.

- Advertisement -

Latest Posts

Don't Miss