ಪೌರಾಣಿಕ ಕಥೆಗಳಲ್ಲಿ ಹಲವು ದೇವರುಗಳ ಬಗ್ಗೆ ಹೇಳಲಾಗಿದೆ. ಇನ್ನೂ ಕೂಡ ಹಲವರಿಗೆ ಕೆಲ ಕಥೆಗಳ ಬಗ್ಗೆ ಅರಿವಿಲ್ಲ. ಅಂಥ ಅಪರೂಪದ ಕಥೆಗಳಲ್ಲಿ ಕಂಜೂಸು ವ್ಯಕ್ತಿ ಮತ್ತು ವಿಷ್ಣುವಿನ ಕಥೆಯೂ ಒಂದು. ಇದು ಮನುಷ್ಯನ ಜೀವನವನ್ನು ಉತ್ತಮ ದಾರಿಗೆ ಕರೆದೊಯ್ಯುವ ಕಥೆಯಾಗಿದೆ. ಹಾಗಾದ್ರೆ ಆ ವ್ಯಕ್ತಿ ಮತ್ತು ವಿಷ್ಣುವಿನ ಮಧ್ಯೆ ಏನು ನಡೀತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಪ್ರಯಾಗರಾಜ್ ಎಂಬ ಸ್ಥಳ, ಗಂಗೆ ವಾಸವಾಗಿರುವ ಪುಣ್ಯಸ್ಥಳ. ಇಲ್ಲಿ ಗಂಗಾ ಸ್ನಾನ ಮಾಡಲು ಹಲವೆಡೆಯಿಂದ ಜನ ಬರುತ್ತಾರೆ. ಇಂಥ ಊರಿನಲ್ಲಿ ಓರ್ವ ಕಂಜೂಸ್ ವ್ಯಕ್ತಿ ಇದ್ದ. ಅವನ ಹೆಸರು ಧ್ಯಾನ್ ಚಂದ್. ಅವನು ಆಗರ್ಭ ಶ್ರೀಮಂತನಾಗಿದ್ದರೂ ಕೂಡ, ಅವನು ಕಂಜೂಸುತನ ಬಿಡುತ್ತಿರಲಿಲ್ಲ. ಅವನು ಮನೆಯಲ್ಲಿ ಪೂಜೆ, ಹೋಮ ಹವನ ಯಾವುದನ್ನೂ ಮಾಡುತ್ತಿರಲಿಲ್ಲ. ಯಾಕಂದ್ರೆ ಆ ಪೂಜೆಯ ಬಳಿಕ, ಪುರೋಹಿತರಿಗೆ ದಕ್ಷಿಣೆ ಕೊಡಬೇಕಾಗುತ್ತದೆ. ಜನರಿಗೆ ಊಟ ಹಾಕಿಸಬೇಕಾಗುತ್ತದೆ ಎಂಬ ಕಾರಣಕ್ಕೆ, ಅವನು ಪೂಜೆಯನ್ನ ಸಹ ಮಾಡಿಸುತ್ತಿರಲಿಲ್ಲ.
ಅಲ್ಲದೇ ಊರಿನಲ್ಲಿ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಯಾಕಂದ್ರೆ ಮಾತನಾಡುತ್ತ, ಅವರು ಇವನ ಬಳಿ ಸಾಲ ಕೇಳಿದರೆ, ಕಷ್ಟವೆಂಬ ಕಾರಣಕ್ಕೆ ಯಾರ ಬಳಿಯೂ ಮಾತನಾಡುತ್ತಿರಲಿಲ್ಲ. ಒಂದು ದಿನ ಅವನ ಪತ್ನಿ ಅವನ ಬಳಿ ಬಂದು ಹೀಗೆಂದಳು. ರೀ, ನಾವು ಪ್ರಯಾಗರಾಜ್‌ನಲ್ಲಿ ಇಷ್ಟು ವರ್ಷದಿಂದ ವಾಸವಿದ್ದೇವೆ. ಆದ್ರೆ ಒಂದು ದಿನವೂ ಗಂಗಾಸ್ನಾನ ಮಾಡಲು ಹೋಗಿಲ್ಲ. ಬನ್ನಿ ಗಂಗೆಯಲ್ಲಿ ಮಿಂದು ಪಾಪಗಳನ್ನ ಕಳೆದುಕೊಳ್ಳೋಣ ಎನ್ನುತ್ತಾಳೆ.
ಅದಕ್ಕೆ ಧ್ಯಾನ್‌ಚಂದ್, ಅಯ್ಯೋ, ನೀನು ದಡ್ಡಿ ಥರ ಮಾತ್ನಾಡ್ತಿಯಲ್ಲಾ. ಅಲ್ಲಿ ಹೋಗಿ ಗಂಗಾ ಸ್ನಾನ ಮಾಡಿ, ಬರುವಾಗ, ಯಾರಾದರೂ ಬ್ರಾಹ್ಮಣರು ಕಂಡರೆ, ಅವರಿಗೆ ದಕ್ಷಿಣೆ ಕೊಡಬೇಕಾಗುತ್ತದೆ. ಸುಮ್ಮನೆ ದುಡ್ಡು ಖರ್ಚಾಗುತ್ತದೆ. ನಮ್ಮ ನಲ್ಲಿಯಲ್ಲಿ ಬರುವುದು ಕೂಡ ಗಂಗಾ ನದಿಯ ನೀರೇ, ಇಲ್ಲೇ ಮಿಂದು, ದೇವರಿಗೊಂದು ಕೈ ಮುಗಿ, ಪಾಪವೆಲ್ಲ ಕಳೆದು ಹೋಗುತ್ತದೆ ಎಂದು ಹೇಳುತ್ತಾನೆ.
ಆದರೆ ಪತ್ನಿ ಮಾತ್ರ ಪಟ್ಟು ಬಿಡೋದಿಲ್ಲಾ. ನೀವೊಬ್ಬರಾದರೂ ಗಂಗಾ ನದಿಗೆ ಹೋಗಲೇಬೇಕು, ಅಲ್ಲಿ ಮಿಂದು ಬರಲೇಬೇಕು ಎಂದು ಹಠ ಹಿಡಿಯುತ್ತಾಳೆ. ಕೊನೆಗೆ ಆಯಿತು ನಾನು ನಾಳೆ ಬೆಳಿಗ್ಗೆ ಹೋಗಿ, ಗಂಗೆಯಲ್ಲಿ ಮಿಂದು ಬರುತ್ತೇನೆ ಎಂದು ಹೇಳುತ್ತಾನೆ. ಮರುದಿನ ಬೆಳಿಗ್ಗೆ ಬೇಗ ಎದ್ದು, ನದಿಗೆ ಮೀಯಲು ಹೋಗುತ್ತಾನೆ. ಅಲ್ಲಿ ಯಾರೂ ಇರೋದಿಲ್ಲ. ಅಬ್ಬಾ ಇಂದು ಇಲ್ಲಿ ಯಾರೂ ಇಲ್ಲ. ನಾನು ಬೇಗ ಸ್ನಾನ ಮುಗಿಸಿ, ಮನೆಗೆ ಹೋಗಿಬಿಡುತ್ತೇನೆ ಎಂದು ಯೋಚಿಸಿ, ಧ್ಯಾನ್‌ಚಂದ್ ನದಿಗೆ ಇಳಿಯುತ್ತಾನೆ.
ಇದನ್ನೆಲ್ಲ ಶ್ರೀವಿಷ್ಣು ನೋಡುತ್ತಿರುತ್ತಾನೆ. ಈ ಕಂಜೂಸು ಮನುಷ್ಯನನ್ನು ಪರೀಕ್ಷೆ ಮಾಡಲೇಬೇಕು ಎಂದು ನಿರ್ಧರಿಸಿ, ವಿಷ್ಣು ಬ್ರಾಹ್ಮಣ ಪಂಡಿತನ ವೇಷ ಧರಿಸಿ, ನದಿಯ ಬಳಿ ಬರುತ್ತಾನೆ. ಅಲ್ಲೇ ಇದ್ದ ಧ್ಯಾನಚಂದನನ್ನು ಕುರಿತು, ಯಜಮಾನರೇ, ನಾನು ಇಲ್ಲೇ ವಾಸಿಸುವ ಬ್ರಾಹ್ಮಣ, ಇಲ್ಲಿ ಬರುವವರು ನನಗೆ ವರ್ಷಕ್ಕಾಗುವಷ್ಟು ಕಾಣಿಕೆಯನ್ನು ಕೊಟ್ಟು ಹೋಗುತ್ತಾರೆ. ನಿಮ್ಮ ಕೈಲಾದಷ್ಟು ದಾನ ಕೊಡಿ ಎಂದು ಕೇಳುತ್ತಾನೆ. ಹಾಗಾದ್ರೆ ಆ ಕಂಜೂಸು ವ್ಯಕ್ತಿ ದಾನ ಕೊಡುತ್ತಾನಾ..? ಇಲ್ಲವಾ..? ಇದರ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..