Health Tips: ಮೊದಲೆಲ್ಲ ನೂರರಲ್ಲಿ ಒಬ್ಬರು ಸಂತಾನಹೀನ ಸಮಸ್ಯೆಯಿದ ಬಳಲುವುದು ಕಾಮನ್ ಆಗಿತ್ತು. ಆದರೆ ಇಂದಿನ ಕಾಲದಲ್ಲಿ ಹಲವರು ಬಂಜೆತನದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂದು ನೂರರಲ್ಲಿ ಹತ್ತು ಜನ ಗರ್ಭ ಧರಿಸಿದರೆ, ಆಶ್ಚರ್ಯ ಪಡಬೇಕಾಗಿರುವ ಪರಿಸ್ಥಿತಿ ಇದೆ. ಇದಕ್ಕೆಲ್ಲ ನಾವು ಜೀವಿಸುವ ಜೀವನ ಶೈಲಿಯೇ ಮುಖ್ಯ ಕಾರಣ. ಹಾಗಾದರೆ ಇಂದಿನವರು ಸಂತಾನಹೀನ ಸಮಸ್ಯೆಯಿಂದ ಬಳಲಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಕಾರಣ ಪ್ಲಾನಿಂಗ್ ನೆಪದಲ್ಲಿ, ಮಕ್ಕಳು ಮಾಡಿಕೊಳ್ಳುವುದನ್ನು ಮುಂದೂಡುವುದು. ಇಂದಿನ ಕಾಲದಲ್ಲಿ ಎಷ್ಟೋ ಜನ, ಮದುವೆಯಾದ ವರ್ಷಕ್ಕೆ ತಂದೆ ತಾಯಿಯಾಗುವುದನ್ನು ಇಷ್ಟಪಡುವುದಿಲ್ಲ. ಸ್ವಲ್ಪ ಲೈಫನ್ನು ಎಂಜಾಯ್ ಮಾಡಿ, ಬಳಿಕ ಮಕ್ಕಳು ಮಾಡೋಣವೆಂದು ಹೇಳುತ್ತಾರೆ. ಆದರೆ ವಯಸ್ಸಾದಂತೆ, ಪುರುಷರಲ್ಲಿ ಕಡಿಮೆ ಗುಣ ಮಟ್ಟಣ ವೀರ್ಯಾಣುಗಳು ಉತ್ಪತ್ತಿಯಾಗುತ್ತದೆ. ಮತ್ತು ಹೆಣ್ಣು ಮಕ್ಕಳಲ್ಲಿ ಅಂಡಾಣುವಿನ ಗುಣಮಟ್ಟ ಕಡಿಮೆಯಾಗುತ್ತದೆ. ಇಂಥ ಸಮಯದಲ್ಲಿ ಮಕ್ಕಳಾಗುವುದಿಲ್ಲ. ಮಕ್ಕಳಾದರೂ ಅವು ಆರೋಗ್ಯವಾಗಿರುವುದಿಲ್ಲ. ಆದ್ದರಿಂದ ವಯಸ್ಸು 30 ದಾಟುವುದರೊಳಗಾಗಿ ತಂದೆ ತಾಯಿಯಾಗುವುದು ಸೂಕ್ತ.
ಎರಡನೇಯ ಕಾರಣ, ಮಾನಸಿಕ ಒತ್ತಡ. ಆಫೀಸು ಕೆಲಸ, ಮನೆಯಲ್ಲಿ ನೆಮ್ಮದಿ ಇಲ್ಲದಿರುವುದು, ಹೀಗೆ ಹಲವು ಮಾನಸಿಕ ಒತ್ತಡಗಳು ಹೆಚ್ಚಾದಾಗ, ಸರಿಯಾಗಿ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಸರಿಯಾಗಿ ನಿದ್ರೆ ಬರುವುದಿಲ್ಲ. ಹೀಗಾಗಿ ಆರೋಗ್ಯವೂ ಹದಗೆಡುತ್ತದೆ. ಆಗ ದೇಹದಲ್ಲಿ ಬಂಜೆತನದ ಸಮಸ್ಯೆ ಹುಟ್ಟಿಕೊಳ್ಳುತ್ತದೆ.
ಮೂರನೇಯ ಕಾರಣ ಹೆಚ್ಚಾಗಿ ಜಂಕ್ ಫುಡ್, ಕೆಫಿನ ಸೇವನೆ ಮಾಡುವುದು. ಬೆಳಿಗ್ಗೆ ಎದ್ದ ತಕ್ಷಣ ಕಾಫಿ. ತಿಂಡಿ ತಿನ್ನುವಾಗ ಕಾಫಿ. ಮಧ್ಯಾಹ್ನ ಊಟವಾದ ಮೇಲೆ ಕಾಫಿ. ಸಂಜೆಯೊಮ್ಮೆ ಕಾಫಿ. ಹೀಗೆ ಮನಸ್ಸಾದಾಗಲೆಲ್ಲ ಕಾಫಿ ಸೇವನೆ ಮಾಡಿದರೆ, ನಿಮ್ಮ ದೇಹದಲ್ಲಿ ಸಂತಾನ ಉತ್ಪತ್ತಿ ಮಾಡುವ ಶಕ್ತಿ ಕುಂದಿ ಹೋಗುತ್ತದೆ. ಹಾಗಾಗಿ ಹೆಚ್ಚು ಕಾಫಿ ಸೇವನೆ, ಟೀ ಸೇವನೆ, ಚಾಕೋಲೇಟ್ ಸೇವನೆ ಮಾಡುವುದನ್ನು ನಿಲ್ಲಿಸಿ.
ನಾಲ್ಕನೇಯ ಕಾರಣ ಕೆಟ್ಟ ಚಟ. ಮದ್ಯಪಾನ, ಧೂಮಪಾನದ ದಾಸರಾಗಿರುವವರಿಗೆ ಮಕ್ಕಳಾಗುವುದು ತುಂಬಾ ಅಪರೂಪ. ಅದರಲ್ಲೂ ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಕೂಡ ಎಣ್ಣೆ ಹಾಕುವುದು, ಸಿಗರೇಟ್ ಎಳೆಯುವುದನ್ನು ಕಲಿತಿದ್ದಾರೆ. ಗಂಡಾಗಲಿ, ಹೆಣ್ಣಾಗಲಿ ಇಂಥ ಚಟದಿಂದ ಮುಕ್ತಿ ಹೊಂದದಿದ್ದಲ್ಲಿ, ಅವರು ಆರೋಗ್ಯಕರವಾಗಿ ಸಂಸಾರ ಮಾಡಲು ಸಾಧ್ಯವಿಲ್ಲ.
ಐದನೇಯ ಕಾರಣ ಸಮಯಕ್ಕೆ ಸರಿಯಾಗಿ ಆಹಾರ ತೆಗೆದುಕೊಳ್ಳದಿರುವುದು. ಇಂದಿನ ಕಾಲದಲ್ಲಿ ಕೆಲಸದ ಒತ್ತಡದಲ್ಲಿ, ಹೆಣ್ಣು ಮಕ್ಕಳು, ಗಂಡು ಮಕ್ಕಳು ಇಬ್ಬರೂ ಹೊತ್ತಿಗೆ ಸರಿಯಾಗಿ ಊಟ ಸೇವಿಸುತ್ತಿಲ್ಲ. ಅದರಲ್ಲೂ ಆಫೀಸಿಗೆ ಹೋಗುವವರು ಹಸಿವಾದಾಗ, ಕೈಗೆ ಸಿಕ್ಕಿದ್ದನ್ನು ಸೇವಿಸುತ್ತಾರೆ. ಹಲವರು ಊಟದ ಹೊತ್ತಿಗೆ ಚಾಟ್ಸ್ ಸೇವನೆ ಮಾಡೋದು ಕಾಮನ್ ಆಗಿ ಬಿಟ್ಟಿದೆ. ಇಂಥ ಕೆಟ್ಟ ಜೀವನ ಶೈಲಿಯಿಂದಲೇ, ಬಂಜೆತನ ಕಾಡುತ್ತಿದೆ. ಹಾಗಾಗಿ ಹೊತ್ತಿಗೆ ಸರಿಯಾಗಿ, ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಸಮಯಕ್ಕೆ ಸರಿಯಾಗಿ ಚಿಂತೆ ಬಿಟ್ಟು ನಿದ್ರಿಸಬೇಕು. ಆಗ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ.