ಹಿಂದೂ ಧರ್ಮದಲ್ಲಿ ಪೂಜೆ ಪುನಸ್ಕಾರಕ್ಕೆ ಎಷ್ಟು ಬೆಲೆ ಇದೆಯೋ, ಅದೇ ರೀತಿ ಉಳಿದ ಪದ್ಧತಿಗಳಿಗೂ ಮಾನ್ಯತೆ ಕೊಡಲಾಗಿದೆ. ಅಷ್ಟೇ ಅಲ್ಲದೇ, ಪೂಜೆಗೆ ಬಳಸುವ ವಸ್ತುಗಳ ಪವಿತ್ರತೆಯನ್ನು ಕಾಪಾಡಲಾಗುತ್ತದೆ. ಅದರಲ್ಲೂ ಪೌರಾಣಿಕ ಕಾಲದಿಂದಲೂ ಮಾನ್ಯತೆ ಪಡೆದಿರುವ ಶಂಖವನ್ನ ಇಂದಿಗೂ ಬಳಸಲಾಗತ್ತೆ. ಮಂದಿರದಲ್ಲಿ ಶಂಖ ಊದಲಾಗುತ್ತದೆ. ಕೆಲವು ಮನೆಗಳಲ್ಲಿ ಬೆಳಿಗ್ಗೆ ಪೂಜೆಯ ಬಳಿಕ, ಸಂಜೆ ದೀಪ ಹಚ್ಚಿದ ಬಳಿಕ, ಶಂಖ ಊದಲಾಗುತ್ತದೆ.
ಯಾಕಂದ್ರೆ ಶಂಖ ಊದುವುದರಿಂದ ಆ ಸ್ಥಳದಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ. ಹಲವು ಕೀಟಾಣುಗಳು ನಾಶವಾಗಿ, ಆ ಸ್ಥಳ ಆರೋಗ್ಯಕರವಾಗಿರುತ್ತದೆ. ಹಾಗಾಗಿ ಶಂಖವನ್ನು ಪದ್ಧತಿಯಿಂದ ಮತ್ತು ವೈಜ್ಞಾನಿಕ ಲಾಭವಿರುವ ಕಾರಣಕ್ಕೂ ಬಳಸಲಾಗುತ್ತದೆ. ನಾವಿಂದು ಪೌರಾಣಿಕವಾಗಿ ಪ್ರಸಿದ್ಧವಾಗಿ ಶಂಖಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ..
ಪಾಂಚಜನ್ಯ ಶಂಖ: ಇದು ಶ್ರೀಕೃಷ್ಣ ಬಳಸುತ್ತಿದ್ದ ಶಂಖದ ಹೆಸರು. ಮಹರ್ಷಿ ಸಾಂದೀಪನಿಯ ಆಶ್ರಮದಲ್ಲಿ ಬಲರಾಮ ಮತ್ತು ಕೃಷ್ಣ ಶಿಕ್ಷಣ ಮುಗಿಸಿದ ಬಳಿಕ, ಗುರುಗಳು ಗುರು ದಕ್ಷಿಣೆಯಾಗಿ, ತನ್ನ ಮೃತ ಪುತ್ರನನ್ನು ಕರೆತರುವಂತೆ ಕೇಳಿದರು. ಶ್ರೀಕೃಷ್ಣ ಮತ್ತು ಬಲರಾಮ ಗುರುಗಳು ಹೇಳಿದ ಕೆಲಸ ಮಾಡಲು, ಸಮುದ್ರದ ಕೆಳಗೆ ಹೋದರು. ಅಲ್ಲಿ ಕೃಷ್ಣ ಶಂಖಾಸುರನೆಂಬ ರಾಕ್ಷಸನನ್ನು ಕೊಂದ. ಅದೇ ಶಂಖಾಸುರ ಸತ್ತ ಬಳಿಕ, ಶಂಖವಾದ. ಆ ಶಂಖವೇ ಪಾಂಚಜನ್ಯ ಶಂಖ. ಇದನ್ನೇ ಶ್ರೀಕೃಷ್ಣ ಬಳಸುತ್ತಿದ್ದ.
ಗಂಗನಾಭ ಶಂಖ: ಭೀಷ್ಮಪಿತಾಮಹರು ಬಳಸುತ್ತಿದ್ದ ಶಂಖವಿದು. ಈ ಶಂಖವನ್ನ ಭೀಷ್ಮರ ತಾಯಿ ಗಂಗಾಮಾತೆ, ಭೀಷ್ಮರಿಗೆ ಕೊಟ್ಟಿದ್ದಳು. ಗಂಗನಾಭದ ಅರ್ಥವೇನೆಂದರೆ, ಗಂಗೆಯ ಧ್ವನಿ. ಭೀಷ್ಮರು ಈ ಶಂಖವನ್ನು ಊದಿ, ಯುದ್ಧಕ್ಕೆ ಇಳಿದರೆ, ಯುದ್ಧ ಮಾಡುವ ಮುನ್ನವೇ, ಅವರ ಎದುರಿದ್ದ ರಾಜರು ಗಡಗಡ ನಡುಗುತ್ತಿದ್ದರಂತೆ. ಮಹಾಭಾರತ ಯುದ್ಧದ ಸಮಯದಲ್ಲಿ ಪಾಂಡವರ ಪರವಾಗಿ ಶ್ರೀಕೃಷ್ಣ ಪಾಂಚಜನ್ಯ ಊದಿದ್ದರೆ, ಕೌರವರ ಕಡೆಯಿಂದ ಭೀಷ್ಮರು ಗಂಗನಾಭವನ್ನು ಊದಿಯೇ ಯುದ್ಧವನ್ನು ಶುರು ಮಾಡಿದ್ದರು.
ಅನಂತ್ ವಿಜಯ್: ಈ ಶಂಖವನ್ನ ಯುಧಿಷ್ಠಿರ ಬಳಸುತ್ತಿದ್ದ. ಈ ಶಂಖವನ್ನ ಊದಿದರೆ, ಅದು ದೂರದೂರದವರೆಗೆ ಕೇಳುತ್ತಿತ್ತು. ಈ ಕಾರಣಕ್ಕೆ ಆ ಶಂಖಕ್ಕೆ ಅನಂತ್ ವಿಜಯ ಎಂದು ಕರೆಯಲಾಗುತ್ತಿತ್ತು. ಈ ಶಂಖವನ್ನು ಸಾಕ್ಷಿಯಾಗಿರಿಸಿಕೊಂಡೇ, ಪಾಂಡವರು ಹಲವು ಯುದ್ಧಗಳಲ್ಲಿ ಗೆಲುವು ಸಾಧಿಸಿದ್ದರು. ಹೀಗೆ ಅನಂತ ಶಂಖ ಬಳಸಿ, ಯುಧಿಷ್ಟಿರದ ರಾಜ್ಯವನ್ನು ಅನಂಥದವರೆಗೂ ಪಸರಿಸಿದರು.
ಈ ವಿಷಯದ ಬಗ್ಗೆ ಇನ್ನಷ್ಟು ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ..