Saturday, July 20, 2024

Latest Posts

ಇಂದಿನ ಪ್ರಮುಖ ಟಾಪ್ 10 ಸುದ್ದಿಗಳು

- Advertisement -

ಜಪಾನ್ 100ನೇ ಪ್ರಧಾನಿಯಾಗಿ ಕಿಶಿಡಾ ಅಧಿಕಾರ ಸ್ವೀಕಾರ

ಜಪಾನಿನ 100ನೇ ಪ್ರಧಾನಿಯಾಗಿ ಫುಮಿಯೋ ಕಿಶಿಡಾ ಅಧಿಕಾರ ಸ್ವೀಕರಿಸಿದ್ದಾರೆ. ಲಿಬರಲ್ ಡೆಮಾಕ್ರೆಟಿಕ್ ಪಾರ್ಟಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದ ಕಿಶಿಡಾ ಇಂದು ಪ್ರಧಾನಿ ಗದ್ದುಗೆ ಏರಿದ್ದಾರೆ. ವಿದೇಶಾಂಗ ವ್ಯವಹಾರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಕಿಶಿಡಾ, ಪ್ರಧಾನಿ ಹುದ್ದೆಗೆ ಆಯ್ಕೆಯಾಗುತ್ತಿದ್ದಂತೆ ತಮ್ಮ ನೂತನ ಕ್ಯಾಬಿನೆಟ್​ನ್ನು ಘೋಷಿಸಿದ್ದಾರೆ. 20 ಮಂದಿ ಹೇಳಿದ್ದು, ಅದರಲ್ಲಿ 13 ಮಂದಿ ಹೊಸಬರಾಗಿದ್ದಾರೆ. ಮೂವರು ಮಹಿಳೆಯರಿಗೂ ಕಿಶಿಡಾ ಸ್ಥಾನ ನೀಡಿದ್ದಾರೆ.

ಕೊರೋನಾ ಸಂಪೂರ್ಣ ನಿರ್ಮೂಲನೆ ಸಾಧ್ಯವಿಲ್ಲವೆಂದು ಒಪ್ಪಿಕೊಂಡ ನ್ಯೂಜಿಲೆಂಡ್

ಕೊರೋನಾ ಸೋಂಕನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಿಲ್ಲ ಅಂತ ನ್ಯೂಜಿಲೆಂಡ್ ಸರ್ಕಾರ ಒಪ್ಪಿಕೊಂಡಿದೆ. ದೇಶದಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಮತ್ತು ಸೋಂಕಿ ಕ್ಷಿಪ್ರ ಪತ್ತೆಹಚ್ಚುವಿಕೆ ಮೂಲಕ ಸೋಂಕನ್ನು ನಿರ್ಮೂಲನೆ ಮಾಡಲು ನ್ಯೂಜಿಲೆಂಡ್ ಮುಂದಾಗಿತ್ತು. ಹೀಗಾಗಿ ದೇಶದಲ್ಲಿ ಒಂದೇ ಪ್ರಕರಣ ಪತ್ತೆಯಾಗುತ್ತಿದ್ದಂತೆ ಲಾಕ್ ಡೌನ್ ಕೂಡ ಜಾರಿ ಮಾಡಿತ್ತು. ಇದರ ಹೊರತಾಗಿಯೂ ಸೋಂಕಿತರ ಸಂಖ್ಯೆ ಹೆಚ್ಚಾಗಿ ಈವರೆಗೂ ನ್ಯೂಜಿಲೆಂಡ್ ನಲ್ಲಿ ಒಟ್ಟು 27 ಮಂದಿ ಸಾವನ್ನಪ್ಪಿದ್ದಾರೆ.

ಪೊರಕೆ ಹಿಡಿದು ಕಸ ಗುಡಿಸಿದ ಪ್ರಿಯಾಂಕಾ ಗಾಂಧಿ…!

ಉತ್ತರ ಪ್ರದೇಶ: ಉತ್ತರ ಪ್ರದೇಶದ ಹೌಸ್ ನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತಾವೇ ಪೊರಕೆ ಹಿಡಿದು ಕಸ ಗುಡಿಸಿರುವ ವಿಡಿಯೋ ವೈರಲ್ ಆಗಿದೆ.

ಉತ್ತರ ಪ್ರದೇಶದ ಲಖಿಂಪುರ್ ನಲ್ಲಿ ರೈತರ ಹತ್ಯೆ ಹಿನ್ನೆಲೆಯಲ್ಲಿ ಅಲ್ಲಿಗೆ ಭೇಟಿ ನೀಡಲು ತೆರಳುತ್ತಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರನ್ನ ಪೊಲೀಸರು ತಡೆದು ಸೀತಾಪುರದ ಪಿಎಸಿ ಗೆಸ್ಟ್ ಹೌಸ್ ನಲ್ಲಿಸಿದ್ರು. ಇನ್ನು ಕೊಠಡಿ ಸ್ವಚ್ಛಗೊಳಿಸೋ ಸಲುವಾಗಿ ಪ್ರಿಯಾಂಕಾ ಗಾಂಧಿ ತಾವೇ ಪೊರಕೆ ಹಿಡಿದು ಕಸ ಗುಡಿಸಿದ್ದಾರೆ. 

ಉತ್ತರಪ್ರದೇಶದಲ್ಲಿ ಪ್ರತಿಭಟನೆ ಕೈಬಿಟ್ಟ ರೈತರು

ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ರೈತರು ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರೊಂದಿಗೆ ಉತ್ತರಪ್ರದೇಶ ಸರ್ಕಾರ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಹೋರಾಟವನ್ನು ಕೈಬಿಡುವುದಾಗಿ ರೈತರು ತಿಳಿಸಿದ್ದಾರೆ. ಇನ್ನು ಹಿಂಸಾಚಾರದಲ್ಲಿ ಮೃತಪಟ್ಟ ನಾಲ್ಕು ರೈತರ ಕುಟುಂಬಗಳಿಗೆ ಉತ್ತರಪ್ರದೇಶ  ಸರ್ಕಾರ ತಲಾ 45 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಜೊತೆಗೆ ಮೃತರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ಹಾಗೂ ಹಿಂಸಾಚಾರದಲ್ಲಿ ಗಾಯಗೊಂಡವರಿಗೆ ತಲಾ 10 ಲಕ್ಷ ರೂ. ಪರಿಹಾರವನ್ನು ಘೋಷಿಸಲಾಗಿದೆ.

ಸಚಿವ ಮಿಶ್ರಾ ವಜಾಗೊಳಿಸಲು ಒತ್ತಾಯ..!

ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಭಾನುವಾರ ನಡೆದ ರೈತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರನ್ನು ಕೇಂದ್ರ ಸಂಪುಟದಲ್ಲಿ ವಜಾಗೊಳಿಸಬೇಕು ಮತ್ತು ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ಉಸ್ತುವಾರಿಯ ವಿಶೇಷ ತನಿಖಾ ತಂಡ ರಚಿಸಬೇಕು ಅಂತ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದೆ.ಅಲ್ಲದೆ ಸಾಂವಿಧಾನಿಕ ಹುದ್ದೆಯಲ್ಲಿರುವಾಗ ಹಿಂಸೆಯನ್ನು ಪ್ರಚೋದಿಸುತ್ತಿರೋ ಹಿನ್ನೆಲೆಯಲ್ಲಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಸಹ ವಜಾಗೊಳಿಸಬೇಕು” ಅಂತಲೂ ಒತ್ತಾಯಿಸಿದೆ.

ಮೇಕೆದಾಟು ಕಾಮಗಾರಿಗೆ ಡಿಕೆಶಿ ಗಡುವು


ಮೇಕೆದಾಟು ಯೋಜನೆ ಕಾಮಗಾರಿ ಕೈಗೆತ್ತಿಗೊಳ್ಳಲು ರಾಜ್ಯ ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಂದು ತಿಂಗಳ ಗಡುವು ನೀಡಿದ್ದಾರೆ. ಡ್ಯಾಮ್ ನಿರ್ಮಾಣ ಮಾಡೋಕೆ ಕಾರ್ಯಕ್ರಮ ರೂಪಿಸಿ. ಒಂದು ತಿಂಗಳ ಗಡುವಿನೊಳಗೆ ಯೋಜನೆ ಪ್ರಾರಂಭಿಸಿ. ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡಿ, ವಿಳಂಬ ಮಾಡಬೇಡಿ. ಇದಕ್ಕೆ ಕಾನೂನು ಹೋರಾಟದ ಅವಶ್ಯಕತೆ ಏನಿದೆ ಅಂತ ಡಿಕೆಶಿ ಪ್ರಶ್ನಿಸಿದ್ದಾರೆ.

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

ಕೊನೆಗೂ ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನ ನಡೆಸಲು ಮನಸು ಮಾಡಿದೆ. ಇದೇ ಡಿಸೆಂಬರ್‌ನಲ್ಲಿ ಈ ಬಾರಿಯ ಚಳಿಗಾಲ ಅಧಿವೇಶನ ನಡೆಯಲಿದೆ ಅಂತ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾಗೇರಿ ಮುಂದಿನ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸುವ ಅಪೇಕ್ಷೆ ಹೊಂದಿದ್ದೇವೆ. ಮುಖ್ಯಮಂತ್ರಿಗಳು ಈ ಬಗ್ಗೆ ಈಗಾಗಲೇ ಹೇಳಿದ್ದಾರೆ. ಹಾಗಾಗಿ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲೇ ನಡೆಯಲಿದೆ ಅಂತ ಸ್ಪಷ್ಟಪಡಿಸಿದ್ದಾರೆ.

500 ರೂಪಾಯಿಗೆ ಪತ್ನಿಯ ಮಾರಾಟ…!

ಅಹಮದಾಬಾದ್ ನಲ್ಲಿ ವ್ಯಕ್ತಿಯೋರ್ವ ಕೈಹಿಡಿದ ಪತ್ನಿಯನ್ನು 500 ರೂಪಾಯಿಗೆ ಮಾರಾಟ ಮಾಡಿದ್ದಾನೆ. ಊಟ ಕೊಡಿಸೋದಾಗಿ ಹೇಳಿದ್ದ ಪತಿ ತನ್ನ 21ವರ್ಷದ ಪತ್ನಿಯನ್ನು ಹೋಟೆಲ್ ವೊಂದಕ್ಕೆ ಕರೆದೊಯ್ದಿದ್ದ. ಆದ್ರೆ ಅಲ್ಲಿ ಆತ ಸೋನು ಶರ್ಮಾ ಎಂಬ ವ್ಯಕ್ತಿಗೆ ತನ್ನ ಪತ್ನಿಯನ್ನು ಮಾರಾಟ ಮಾಡಿದ್ದಾನೆ. ಅಲ್ಲದೆ ಆತನಿಂದ 500ರೂಪಾಯಿಯನ್ನೂ ಪಡೆದಿದ್ದಾನೆ. ಇನ್ನು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ಯ ಸೋನು ಶರ್ಮಾ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆತನಿಂದ ತಪ್ಪಿಸಿಕೊಂಡ ಬಳಿಕ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸದ್ಯ ಆಕೆಯ ಪತಿ ಹಾಗೂ ಆರೋಪಿ ಸೋನು ಶರ್ಮಾನನ್ನು ಪೊಲೀಸರು ಬಂಧಿಸಿದ್ದಾರೆ.

ನಾನು ಮೊದಲು ಬದಲಾಗಬೇಕೆಂದ ಸಮಂತಾ

ನಾಗಚೈತನ್ಯ ಜೊತೆ ವಿಚ್ಚೇಧನದನ ಬಳಿಕ ನಟಿ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ‘ಜಗತ್ತನ್ನು ಬದಲಾಯಿಸಬೇಕಾದರೆ ಮೊದಲು ನಾನು ನನ್ನನ್ನು ಬದಲಿಸಿಕೊಳ್ಳಬೇಕು. ನನ್ನೆಲ್ಲಾ ಕೆಲಸಗಳನ್ನು ನಾನೇ ಮಾಡಿಕೊಳ್ಳಬೇಕು.  ನಾನು ಸುಳ್ಳುಹೇಳಬಾರದು.’ ಅನ್ನೋ ಇಂಗ್ಲಿಷ್ ಹಾಡಿನ ಸಾಲುಗಳನ್ನ ಸಮಂತಾ ಬರೆದುಕೊಂಡಿದ್ದಾರೆ. ಅಲ್ಲದೆ ನಾನು ಮುಂದೆ ಮಾಡಬೇಕಾದ ಕೆಲಸಗಳ ಬಗ್ಗೆ ಕನಸು ಕಾಣಬೇಕಿದೆ ಅಂತಲೂ ಸಮಂತಾ ಪೋಸ್ಟ್ ಮಾಡಿದ್ದಾರೆ.

ಇಂದು ಡೆಲ್ಲಿ-ಚೆನ್ನೈ ಸೆಣಸಾಟ

ಐಪಿಎಲ್ ನ ಇಂದಿನ 50ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್  ತಂಡಗಳು ಎದುರಾಗಿಲಿವೆ. ಎರಡೂ ತಂಡಗಳೂ ಐಪಿಎಲ್ ಅಂಕಪಟ್ಟಿಯಲ್ಲಿ ಸಮಬಲ ಸಾಧಿಸಿ ಈಗಾಗಲೇ ಪ್ಲೇ ಆಫ್ ಗೆ ಕ್ವಾಲಿಫೈ ಆಗಿವೆ. ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕಾಗಿ ಉಭಯ ತಂಡಗಳು ಸೆಣಸಾಡಲಿವೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಈ ಪಂದ್ಯದಲ್ಲಿ ಡೆಲ್ಲಿ ಗೆದ್ದರೆ ಐಪಿಎಲ್ ನ ಅಂಕಪಟ್ಟಿಯಲ್ಲಿ ಟಾಪ್ ಪಟ್ಟಕ್ಕೇರಲಿದೆ.

- Advertisement -

Latest Posts

Don't Miss