ಮೊದಲೆಲ್ಲ ಪಾವ್ ಮಧ್ಯೆ ವಡಾ ಇಟ್ಟು, ವಡಾಪಾವ್ ಮಾಡಿ ತಿನ್ನುತ್ತಿದ್ದರು. ಆದ್ರೆ ಈಗೇನಿದ್ದರೂ ಉಲ್ಟಾ ವಡಾಪಾವ್ ಜಮಾನಾ. ಈಗ ಬನ್ನನ್ನೇ ಹಿಟ್ಟಿನಲ್ಲಿ ಅದ್ದಿ ಕರಿದುಬಿಡ್ತಾರೆ. ಈ ರೆಸಿಪಿಯನ್ನ ನೀವು ಮನೆಯಲ್ಲೇ ತಯಾರಿಸಬಹುದು. ಹಾಗಾದ್ರೆ, ಉಲ್ಟಾ ವಡಾಪಾವ್ ಹೇಗೆ ತಯಾರಿಸೋದು ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಕೊಂಚ ಸಾಸಿವೆ, ಎರಡು ಹಸಿಮೆಣಸು, ನಾಲ್ಕು ಎಸಳು ಬೆಳ್ಳುಳ್ಳಿ, ಚಿಕ್ಕ ತುಂಡು ಶುಂಠಿ, ಕರಿಬೇವು, ಅರಿಶಿನ, 4 ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆ, 2 ಸ್ಪೂನ್ ನಿಂಬೆರಸ, ಸಣ್ಣಗೆ ಕತ್ತರಿಸಿದ ಕೊತ್ತೊಂಬರಿ ಸೊಪ್ಪು, 2ಕಪ್ ಕಡಲೆಹಿಟ್ಟು, ಅರ್ಧ ಸ್ಪೂನ್ ಖಾರದ ಪುಡಿ, ಅರ್ಧ ಸ್ಪೂನ್ ಬೇಕಿಂಗ್ ಸೋಡಾ, ಪಾವ್ (ಬನ್), ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಪುದೀನಾ ಚಟ್ನಿ, ಬೆಳ್ಳುಳ್ಳಿ ಚಟ್ನಿ ಪುಡಿ.
ಮಾಡುವ ವಿಧಾನ: ಮೊದಲು ಪ್ಯಾನ್ ಬಿಸಿ ಮಾಡಿ, 3 ಸ್ಪೂನ್ ಎಣ್ಣೆ ಹಾಕಿ. ಸಾಸಿವೆ, ಬೆಳ್ಳುಳ್ಳಿ, ಹಸಿಮೆಣಸು, ಶುಂಠಿ, ಕರಿಬೇವು, ಅರಿಶಿನ, ಉಪ್ಪು ಇವಿಷ್ಟನ್ನು ಹಾಕಿ ಹುರಿಯಿರಿ. ಇದಕ್ಕೆ ಆಲೂಗಡ್ಡೆ, ನಿಂಬೆರಸ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ, ಕೊನೆಗೆ ಕೊತ್ತೊಂಬರಿ ಸೊಪ್ಪು ಮಿಕ್ಸ್ ಮಾಡಿದ್ರೆ, ಆಲೂಗಡ್ಡೆ ಮಸಾಲೆ ರೆಡಿ.
ಇದು ತಣಿಯುವವರೆಗೂ, ಕಡಲೆಹಿಟ್ಟಿನ ಮಿಶ್ರಣ ರೆಡಿ ಮಾಡಿಕೊಳ್ಳಿ. ಒಂದು ದೊಡ್ಡ ಬೌಲಿನಲ್ಲಿ ಕಡಲೆಹಿಟ್ಟು, ಖಾರದ ಪುಡಿ, ಅರಿಶಿನ, ಉಪ್ಪು, ಬೇಕಿಂಗ್ ಸೋಡಾ, ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಬಜ್ಜಿ ಹಿಟ್ಟನ್ನು ತಯಾರಿಸಿ.
ಈಗ ಪಾವ್ ತೆಗೆದುಕೊಂಡು ಅರ್ಧ ಭಾಗ ಮಾಡಿ. ಆದರೆ ಪೂರ್ತಿಯಾಗಿ ಕತ್ತರಿಸಬೇಡಿ. ಪಾವ್ ಮಧ್ಯದಲ್ಲಿ ಒಂದು ಬದಿ, ಪುದೀನಾ ಚಟ್ನಿ ಮತ್ತೊಂದು ಬದಿ ಬೆಳ್ಳುಳ್ಳಿ ಚಟ್ನಿ ಪುಡಿ ಸವರಿ. ನಂತರ ಆಲೂಗಡ್ಡೆಯ ಪಲ್ಯ ತುಂಬಿಸಿ. ಈಗ ಈ ಪಾವನ್ನ ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಈಗ ಉಲ್ಟಾ ವಡಾ ಪಾವ್ ರೆಡಿ.