Spiritual: ಹಿಂದೂ ಧರ್ಮದಲ್ಲಿ ಓರ್ವ ವ್ಯಕ್ತಿ ಅತ್ತೆಯ ಮಗಳನ್ನೋ, ಮಾವನ ಮಗಳನ್ನೋ ಅಥವಾ ತಮ್ಮದೇ ಜಾತಿಯ ಹೆಣ್ಣನ್ನ ಮದುವೆಯಾಗಬೇಕು ಎಂಬುದು ಪದ್ಧತಿ. ಆದರೆ ನೀವು ಎಲ್ಲಾದರೂ ಅಣ್ಣ- ತಂಗಿ ಮದುವೆಯಾಗಿರುವುದನ್ನ ನೋಡಿದ್ದೀರಾ. ಕಲಿಯುಗದಲ್ಲಿ ಇಂಥ ಘಟನೆ ಹಲವು ನಡೆದಿರಬಹುದು. ಆದರೆ ಹಿಂದೂ ಧರ್ಮದಲ್ಲಿ ಅದಕ್ಕೆ ಆಸ್ಪದವಿಲ್ಲ. ನಾವಿಂದು ಅಧರ್ಮಿ ಅಣ್ಣ- ತಂಗಿಯ ಮದುವೆ ಕಥೆಯನ್ನ ಹೇಳಲಿದ್ದೇವೆ..
ಅಧರ್ಮ ಮತ್ತು ಧರ್ಮನೆಂಬ ಸಹೋದರರಿದ್ದರು. ಅಧರ್ಮ ಯಾವಾಗಲೂ ಧರ್ಮನ ವಿರುದ್ಧವೇ ಇರುತ್ತಿದ್ದ. ಧರ್ಮ ಏನೇನು ಮಾಡುತ್ತಿದ್ದನೋ, ಅದರ ವಿರುದ್ಧವಾಗಿಯೇ ಕೆಲಸ ಮಾಡುತ್ತಿದ್ದ. ಅಧರ್ಮನ ಸಂಗ ಮಾಡಿದವರೆಲ್ಲ, ಚಟ ಚಕ್ರವರ್ತಿಗಳಾಗುತ್ತಿದ್ದರು. ಕೆಟ್ಟ ದಾರಿ ಹಿಡಿಯುತ್ತಿದ್ದರು. ಪೂಜೆ ಪುನಸ್ಕಾರ ಮಾಡುತ್ತಿದ್ದವರೂ ಕೂಡ, ಅವನ ಸಂಗದಿಂದ ಹಾಳಾಗುತ್ತಿದ್ದರು.
ಅಧರ್ಮನಿಗೆ ಮೃಷಾ ಎಂಬುವವಳೊಂದಿಗೆ ವಿವಾಹವಾಗಿತ್ತು. ಈಕೆ ಅಧರ್ಮನ ಸ್ವಂತ ತಂಗಿಯಾಗಿದ್ದಳು. ಇವನು ಸದಾ ಕೆಟ್ಟದ್ದೇ ಮಾಡುವವನಾಗಿದ್ದು, ಪದ್ಧತಿಯ ವಿರುದ್ಧ ಹೋಗಿ, ಮೃಷಾಳನ್ನು ವಿವಾಹವಾದ. ಇವರಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಜನಿಸಿದರು. ಪುತ್ರನ ಹೆಸರು ಧಂಬನಾಗಿದ್ದರೆ, ಪುತ್ರಿಯ ಹೆಸರು ಮಾಯಾ ಆಗಿತ್ತು.
ಇವರಿಬ್ಬರೂ ದೊಡ್ಡವರಾದ ಮೇಲೆ. ತಂದೆಯ ರೀತಿಯೇ ಧಂಬ ತನ್ನ ಸಹೋದರಿ ಮಾಯಾಳೊಂದಿಗೆ ವಿವಾಹವಾದ. ಇವರಿಗೂ ಇಬ್ಬರು ಮಕ್ಕಳಾದರು. ಪುತ್ರ ಲಾಲಜ್ ಆದರೆ, ಪುತ್ರಿ ನಿಕೃತಿಯಾಗಿದ್ದಳು. ಇವರು ಕೂಡ ಹಿರಿಯರಂತೆ ವಿವಾಹವಾಗಿ, ಕ್ರೋಧ ಮತ್ತು ಹಿಂಸೆ ಎಂಬ ಮಕ್ಕಳಿಗೆ ಜನ್ಮವಿತ್ತರು. ಕಥೆ ಹೀಗೆ ಮುಂದುವರಿಯಿರಿ. ಅವರೂ ವಿವಾಹವಾದರು. ಇವರಿಗೆ ಕಲಹ ಮತ್ತು ದುರುಕ್ತಿ ಎಂಬ ಮಕ್ಕಳಾದರು. ಇವರು ಹಳೇ ಚಾಳಿಯೇ ಮುಂದುವರಿಸಿದರು.
ಈ ಕಥೆಯ ಅರ್ಥವೇನೆಂದರೆ, ಎಲ್ಲಿ ಅಧರ್ಮವಿರುತ್ತದೆಯೋ, ಅಲ್ಲಿ ಈ ಮೇಲಿನ ಎಲ್ಲರೂ ಇರುತ್ತಾರೆ. ಅಧರ್ಮದ ಹಾದಿ ಹಿಡಿದವನ ಜೊತೆ ದುರಾಸೆ, ವಿಕೃತಿ, ಮಾಯೆ, ಕ್ರೋಧ, ಹಿಂಸೆ, ಕಲಹ, ಬೈಗುಳ ಎಲ್ಲವೂ ಇರುತ್ತದೆ. ಇಂಥವರ ಚಾಳಿಯ ಪಟ್ಟಿ ಬೆಳೆಯುತ್ತ ಹೋಗುತ್ತದೆಯೇ ಹೊರತು, ನಿಲ್ಲುವುದಿಲ್ಲ. ಹಾಗಾಗಿ ಎಂದಿಗೂ ಅಧರ್ಮದ ಹಾದಿ ಹಿಡಿಯಬಾರದು ಅನ್ನೋದೇ ಇದರ ಸಂದೇಶ.