Deepavali Special: ನವೆಂಬರ್ ತಿಂಗಳಲ್ಲಿ ಬರುವ ಹಿಂದೂಗಳ ಪ್ರಮುಖ ಹಬ್ಬವಾದ ದೀಪಾವಳಿ ಹಬ್ಬ ಸಮೀಪಿಸಿದೆ. 5 ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ಬರುವ ಪ್ರಮುಖ ಪದ್ಧತಿ ಅಂದ್ರೆ, ಅಭ್ಯಂಗ ಸ್ನಾನ. ಅಂದರೆ ಎಣ್ಣೆ ಸ್ನಾನ. ನರಕ ಚತುರ್ದಶಿಯ ಹಿಂದಿನ ದಿನ ಸಂಜೆ, ಮನೆಯಲ್ಲಿರುವ ಬಿಂದಿಗೆಗೆ ಪೂಜೆ ಸಲ್ಲಿಸಿ, ಮರುದಿನ ದೇಹಕ್ಕೆ ಎಣ್ಣೆ ಹಚ್ಚಿ, ಸ್ನಾನ ಮಾಡಿ, ದೇವರಿಗೆ ಪೂಜೆ ಸಲ್ಲಿಸುವ ಪದ್ಧತಿ ಹಿಂದೂಗಳಲ್ಲಿದೆ. ಹಾಗಾದ್ರೆ ಯಾಕೆ ದೀಪಾವಳಿ ಹಬ್ಬಕ್ಕೆ ಅಭ್ಯಂಗ ಸ್ನಾನ ಮಾಡಬೇಕು..? ಏನಿದರ ಮಹತ್ವ ಅಂತಾ ತಿಳಿಯೋಣ ಬನ್ನಿ..
ನರಕಾಸುರನ ವಧೆಯ ಪ್ರತೀಕವಾಗಿ ಅಭ್ಯಂಗ ಸ್ನಾನ ಮಾಡಲಾಗುತ್ತದೆ ಎಂದು ಪೌರಾಣಿಕವಾಗಿ ಹೇಳಲಾಗಿದೆ. ಆದರೆ ಚತುರ್ದಶಿ ಎನ್ನುವಂಥದ್ದು, ನರಕಾಸುರನ ವಧೆಗಿಂತ, ಮೊದಲೇ ಇದ್ದಿದ್ದು. ಹಾಗಾಗಿ ಈ ದಿನವನ್ನು ನರಕ ಚತುರ್ದಶಿ ಎಂದು ಕರೆಯಲಾಗುತ್ತದೆ. ಹಾಗಾಗಿ ಅಭ್ಯಂಗ ಸ್ನಾನ ಮಾಡುವುದು ಕೂಡ, ನರಕಾಸುರನ ವಧೆಗೂ ಮುನ್ನವೇ ಇದ್ದಿದ್ದು. ಮಹಾಭಾರತ ಕಾಲದಲ್ಲಿ ಶ್ರೀಕೃಷ್ಣನಿಂದ ನರಕಾಸುರನ ವಧೆ ಆಯಿತು. ಆದರೆ ಅದಕ್ಕೂ ಮುನ್ನವೇ, ಶ್ರೀಕೃಷ್ಣನೂ ಸೇರಿದಂತೆ, ಪೂರ್ವಜರು, ಅಭ್ಯಂಗ ಸ್ನಾನವನ್ನು ಮಾಡಿಯೇ, ದೀಪಾವಳಿ ಆಚರಿಸುತ್ತಿದ್ದರು.
ಇದು ಪೌರಾಣಿಕ ಹಿನ್ನೆಲೆಯಾದರೆ, ಅಭ್ಯಂಗ ಸ್ನಾನಕ್ಕೆ ವೈಜ್ಞಾನಿಕ ಹಿನ್ನೆಲೆಯೂ ಇದೆ. ದೇಹಕ್ಕೆ ಎಣ್ಣೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ, ಕೆಲ ಕಾಲ ತಡೆದು, ಬಳಿಕ ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ, ನಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ. ಕೈ ಕಾಲು ಗಟ್ಟಿಮುಟ್ಟಾಗಿರುತ್ತದೆ. ಹಲವರು ತಿಂಗಳಿಗೆ ಒಮ್ಮೆಯಾದರೂ ಈ ರೀತಿ ಸ್ನಾನ ಮಾಡುತ್ತಾರೆ.
ಅಂತೆಯೇ ಕೆಲವರು ಮಸಾಜ್ ಸೆಂಟರ್‌ಗಳಿಗೆ ಭೇಟಿ ಕೊಟ್ಟು ಈ ರೀತಿ ಎಣ್ಣೆ ಮಸಾಜ್ ಮಾಡಿಕೊಂಡು, ಅಲ್ಲೇ ಸ್ನಾನ ಮಾಡುತ್ತಾರೆ. ಎಣ್ಣೆ ಸ್ನಾನ ಇಷ್ಟು ಆರೋಗ್ಯಕರವಾಗಿದೆ ಎಂಬ ಕಾರಣಕ್ಕಾಗಿಯೇ, ಪುಟ್ಟ ಮಕ್ಕಳಿಗೆ ಪ್ರತಿದಿನ ಇಡೀ ದೇಹಕ್ಕೆ, ಎಣ್ಣೆ ಹಚ್ಚಿ, ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಸಲಾಗುತ್ತದೆ. ಇನ್ನು ಕೆಲವರು ದೇಹಕ್ಕೆ ಎಣ್ಣೆ ಹಚ್ಚಿ, ಚೆನ್ನಾಗಿ ಮಸಾಜ್ ಮಾಡಿ ಸ್ನಾನವೇ ಮಾಡುವುದಿಲ್ಲ. ನಾರ್ಮಲ್ ಆಗಿ ಸ್ನಾನ ಮಾಡುತ್ತಾರೆ. ಹಾಗಾಗಿ ವರ್ಷಕ್ಕೆ ಒಮ್ಮೆಯಾದರೂ ಈ ರೀತಿ ಸ್ನಾನ ಮಾಡಿ, ಆರೋಗ್ಯವಂತರಾಗಿರಲಿ ಎಂದು, ಇದನ್ನು ಹಬ್ಬದ ಭಾಗವಾಗಿ ಮಾಡಲಾಗಿದೆ.