ಗರ್ಭಾವಸ್ಥೆ ಎಂದರೆ, ಹೆಣ್ಣಿಗೆ ಇನ್ನೊಂದು ಜನ್ಮವಿದ್ದಂತೆ. ಆಕೆ ಆ ಸಮಯದಲ್ಲಿ ಎಷ್ಟು ಕಾಳಜಿ ಮಾಡಿದರೂ, ಅದು ಕಡಿಮೆಯೇ. ಏಕೆಂದರೆ, ಆಕೆಯ ಮೇಲೆ ಇನ್ನೊಂದು ಜೀವವನ್ನು ಭೂಮಿಗೆ ತರುವ ಜವಾಬ್ದಾರಿ ಇರುತ್ತದೆ. ಆ ಜೀವ, ಆರೋಗ್ಯವಾಗಿ ಇರಬೇಕೆಂದರೆ, ತಾಯಿಯಾದವಳು, ಅಪಾರ ಕಾಳಜಿ ವಹಿಸಬೇಕಾಗುತ್ತದೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ಹೆಣ್ಣಿನ ಉತ್ತಮ ಆಹಾರ, ಹಾಲು, ಮೊಸರು, ತುಪ್ಪ, ಹಣ್ಣು- ತರಕಾರಿ, ಸೊಪ್ಪು, ಮೊಳಕೆ ಕಾಳುಗಳನ್ನೆಲ್ಲ ಯಥೇಚ್ಛವಾಗಿ ತಿನ್ನಬೇಕು ಅಂತಾ ಹೇಳುತ್ತಾರೆ. ಇದರ ಜೊತೆಗೆ ವೈದ್ಯರು ನೀಡುವ ಕಬ್ಬಿಣಾಂಶದ ಮಾತ್ರೆಯನ್ನ ಕೂಡ ಗರ್ಭಿಣಿಯಾದವಳು ಸೇವಿಸಲೇಬೇಕು. ಹಾಗಾದ್ರೆ ಯಾಕೆ ಗರ್ಭಿಣಿಯರಿಗೆ ಈ ಮಾತ್ರೆ ಕೊಡಲಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಗರ್ಭಾವಸ್ಥೆಯಲ್ಲಿ ಕಬ್ಬಿಣದ ಮಾತ್ರೆಯನ್ನ ತಪ್ಪದೇ ತೆಗೆದುಕೊಳ್ಳಬೇಕು. ಇದರ ಸೇವನೆಯಿಂದಲೇ ಮಗು ಆರೋಗ್ಯವಾಗಿ, ಗಟ್ಟಿಮುಟ್ಟಾಗಿರುತ್ತೆ. ಅಲ್ಲದೇ, ತಾಯಿಯ ಮೂಳೆಗಳು ಕೂಡ ಗಟ್ಟಿಯಾಗುತ್ತದೆ. ಆಕೆಗೂ ಮಗುವನ್ನ ಹೊರಲು ಶಕ್ತಿ ಬೇಕಾಗುತ್ತದೆ. ಇದು ಆ ಕಬ್ಬಿಣದ ಮಾತ್ರೆಯಿಂದ ಸಿಗುತ್ತದೆ. ಅಲ್ಲದೇ ಯಾರ ದೇಹದಲ್ಲಿ ಕಬ್ಬಿಣಾಂಶ ಕಡಿಮೆ ಇರುತ್ತದೆಯೋ, ಅಂಥವರ ಗರ್ಭದಲ್ಲಿ ಜನಿಸುವ ಮಕ್ಕಳು ಅಂಗವಿಕಲರಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಹೆಣ್ಣು ಗರ್ಭಿಣಿ ಎಂದು ಗೊತ್ತದ ಬಳಿಕ ಆಕೆಗೆ ವೈದ್ಯರು ಕಬ್ಬಿಣಾಂಶದ ಮಾತ್ರೆ ಸೇವಿಸಲು ಹೇಳುತ್ತಾರೆ.
ಇಷ್ಟೇ ಅಲ್ಲದೇ, ತಾಯಿಯ ದೇಹದಲ್ಲಿ ರಕ್ತಹೀನತೆ ಇದ್ದರೆ, ಅದು ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ತಾಯಿ ಸೇವಿಸಿದ ಆಹಾರವೆಲ್ಲ, ಮಗುವಿನ ದೇಹಕ್ಕೆ ರಕ್ತದ ಮೂಲಕವೇ ಹೋಗುತ್ತದೆ. ಹಾಗಾಗಿ ತಾಯಿ ರಕ್ತಹೀನತೆಯಿಂದ ಕೊರಗಬಾರದು. ಇದೇ ಕಾರಣಕ್ಕೆ ಕಬ್ಬಿಣದ ಮಾತ್ರೆಯನ್ನು ಸೇವಿಸಲು ಶಿಫಾರಸ್ಸು ಮಾಡಲಾಗುತ್ತದೆ.
ಗರ್ಭಿಣಿಯರಿಗೆ ಶೀತ, ಜ್ವರ ಬರುವುದು ಕಡಿಮೆ. ಯಾಕೆ ಕಡಿಮೆ ಎಂದರೆ, ಅವರು ತೆಗೆದುಕೊಳ್ಳುವ ಕಬ್ಬಿಣಾಂಶದ ಮಾತ್ರೆಯೇ, ಅವರ ದೇಹಕ್ಕೆ ಸೋಂಕು ತಗಲದಂತೆ ತಡೆಯುತ್ತದೆ. ಹಾಗಾಗಿ ಗರ್ಭಿಣಿಯರು ತಪ್ಪದೇ, ಕಬ್ಬಿಣಾಂಶದ ಮಾತ್ರೆಯನ್ನು ತೆಗೆದುಕೊಳ್ಳಲೇಬೇಕು.