ಇನ್ಸ್ಟಾ ಸ್ಟಾರ್ ಮೇಲೆ ದುಷ್ಕರ್ಮಿಗಳಿಂದ ದಾಳಿ: ನನಗಾಗಿ ಪ್ರಾರ್ಥಿಸಿ ಎಂದ ಕಿಲಿ ಪೌಲ್

ಆಫ್ರಿಕಾದ ತಾಂಜೇನಿಯಾದಲ್ಲಿರುವ ಇನ್‌ಸ್ಟಾ ಸ್ಟಾರ್ ಕಿಲಿ ಪೌಲ್ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಐವರು ಪುಂಡರು ಬಂದು ಅಚಾನಕ್ಕಾಗಿ ಕಿಲಿ ಪೌಲ್‌ ಮೇಲೆ ದಾಳಿ ಮಾಡಿದ್ದು, ಕೈ ಕಾಲು, ಕಿವಿ ಸೇರಿ ಹಲವು ಕಡೆ ಪೆಟ್ಟಾಗಿದೆ. ಸದ್ಯಕ್ಕೆ ಕಿಲಿ ಪೌಲ್‌ನನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದ್ದು, ನನಗಾಗಿ ಪ್ರಾರ್ಥಿಸಿ ಎಂದು ಕಿಲಿ, ಇನ್‌ಸ್ಟಾಗ್ರಾಮ್‌ನಲ್ಲಿ ಎಲ್ಲರನ್ನೂ ಕೋರಿದ್ದಾರೆ.

ಕಿಲಿ ಪೌಲ್ ಮತ್ತು ಅವರ ಸಹೋದರಿ ನೀಮಾ ಪೌಲ್ ಭಾರತ ಸೇರಿ, ಹಲವು ದೇಶಗಳಲ್ಲಿ ಸಖತ್ ಫೇಮಸ್ ಇದ್ದಾರೆ. ಇವರು ಹಿಂದಿ, ತೆಲುಗು, ಕನ್ನಡ ಸೇರಿ ಭಾರತದ ಹಲವು ಭಾಷೆಗಳಲ್ಲಿ, ಮತ್ತು ಪ್ರಪಂಚದ ಬೇರೆ ಬೇರೆ ಭಾಷೆಯಲ್ಲಿರುವ ಸಿನಿಮಾ ಡೈಲಾಗ್, ಹಾಡಿಗೆ ಲಿಪ್ ಸಿಂಕ್ ಮಾಡಿದ್ದಾರೆ. ನೃತ್ಯ ಮಾಡಿದ್ದಾರೆ. ಇವರ ಟ್ಯಾಲೆಂಟ್ ಗುರುತಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಮನ್‌ ಕೀ ಬಾತ್ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ್ದರು.

ಅಲ್ಲದೇ, ತಾಂಜೇನಿಯಾದಲ್ಲಿರುವ ಭಾರತದ ರಾಯಭಾರಿ ಕಚೇರಿಯಲ್ಲಿ, ಕಿಲಿ ಪೌಲ್‌ರನ್ನು ಆಮಂತ್ರಿಸಿ, ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಈ ಬಗ್ಗೆ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದು, ಭಾರತಿಯ ಫಾಲೋವರ್ಸ್‌ಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು, ಜೈಹಿಂದ್ ಎಂದು ಬರೆದುಕೊಂಡಿದ್ದರು.

ಇನ್‌ಸ್ಟಾಗ್ರಾಮ್‌ನಲ್ಲಿ 3.6 ಮಿಲಿಯನ್ ಫಾಲೋವರ್ಸ್ ಹೊಂದಿರುವ ಕಿಲಿ ಪೌಲ್, ಕೆಜಿಎಫ್ 2 ಚಿತ್ರದ ಹಾಡು ಸೇರಿ, ತಮಿಳು, ತೆಲುಗು, ಹಿಂದಿ ಸಿನಿಮಾ ಹಾಡು, ಡೈಲಾಗ್‌ಗಳಿಗೆ ಕಿಲಿ ಲಿಪ್ ಸಿಂಕ್ ಮಾಡಿದ್ದಾರೆ. ಅಲ್ಲದೇ, 2022ರ ಗಣರಾಜ್ಯೋತ್ಸವದಂದು ನಮ್ಮ ರಾಷ್ಟ್ರಗೀತೆ ಜನಗಣಮನ ಹಾಡಿ, ವಂದನೆ ಸಲ್ಲಿಸಿದ್ದರು.

About The Author