ಕೆಲವರಿಗೆ ತಮ್ಮ ಜೀವನವನ್ನ ಇನ್ನೊಬ್ಬರ ಜೀವನದ ಜೊತೆ ಹೋಲಿಕೆ ಮಾಡುವ ಗುಣವಿರುತ್‌ತದೆ. ಅವನ ಬಳಿ ಕಾರ್ ಇದೆ ನನ್ನ ಬಳಿ ಕಾರ್ ಇಲ್ಲಾ. ಅವಳ ಗಂಡ ಅವಳಿಗೆ ಚಿನ್ನದ ನೆಕ್ಲೇಸ್ ಕೊಡಿಸಿದನಂತೆ, ನನ್ನ ಗಂಡ ಬರೀ ಬೆಳ್ಳಿ ಗೆಜ್ಜೆ ಕೊಡಿಸಿದ್ದಾನೆ. ಅವನ ಅಮ್ಮ ಎಷ್ಟು ಟಿಪ್ ಟಾಪ್ ಆಗಿ ಶಾಲೆಗೆ ಬರ್ತಾರೆ. ನನ್ನ ಅಮ್ಮ ಹಳ್ಳಿ ಹೆಂಗಸಿನ ಹಾಗೆ ಬರ್ತಾರೆ. ಹೀಗೆ ತಮ್ಮ ಜೀವನವನ್ನ, ತಮ್ಮ ಮನೆ ಜನರನ್ನ ಇನ್ನೊಬ್ಬರ ಜೊತೆ ಹೋಲಿಕೆ ಮಾಡುವ ಸ್ವಭಾವ ಹಲವರಿಗಿರುತ್ತದೆ. ಆದ್ರೆ ಈ ರೀತಿಯಾಗಿ ನಾವು ನಮ್ಮನ್ನು ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳಬಾರದು. ಯಾಕೆ ಹೋಲಿಕೆ ಮಾಡಿಕೊಳ್ಳಬಾರದು ಅಂತಾ ತಿಳಿಯೋಣ ಬನ್ನಿ..
ಒಂದೂರಲ್ಲಿ ಒಬ್ಬ ಉತ್ತಮ ಕರಾಟೆ ಪಟುವಿದ್ದ. ಅವನಿಗೆ ತಾನು ಉತ್ತಮ ಕರಾಟೆ ಪಟುವೆಂಬ ಅಹಂ ಇತ್ತು. ಆದ್ರೆ ಒಮ್ಮೆ ಅವನು ಓರ್ವ ಕರಾಟೆ ಗುರುವನ್ನ ಭೇಟಿ ಮಾಡಿದ. ಆ ಗುರುವನ್ನು ಕಂಡು ಮತ್ತು ಅವರ ಶಿಷ್ಯರು ಅವರಿಗೆ ನೀಡುತ್ತಿದ್ದ ಗೌರವವನ್ನು ಕಂಡು, ಈ ಕರಾಟೆ ಪಟುವಿಗೆ ಬೇಸರವಾಯ್ತು. ಯಾಕಂದ್ರೆ ಆ ಗುರುವಿನ ಮುಂದೆ ತಾನು ತುಚ್ಛನಾಗಿದ್ದೇನೆ ಎಂದೆನ್ನಿಸಿತ್ತು ಆ ಕರಾಟೆ ಪಟುವಿಗೆ.
ಈ ಕಥೆಯನ್ನ ಕೇಳಿದ್ದಲ್ಲಿ ನಿಮ್ಮ ಸೋಂಬೇರಿತನವನ್ನ ಬಿಡುತ್ತೀರಿ..
ಅವನು ಗುರುಗಳ ಬಳಿ ಹೋಗಿ, ನಾನು ಇಷ್ಟು ದಿನ ಉತ್ತಮ ಕರಾಟೆ ಪಟುವೆಂದು ಮೆರೆಯುತ್ತಿದ್ದೆ. ಆದ್ರೆ ನಿಮ್ಮನ್ನು ನಿಮ್ಮ ಶಿಷ್ಯರು ಗೌರವಿಸುವ ರೀತಿಯನ್ನು ಕಂಡು ನನಗೆ ನನ್ನ ಬಗ್ಗೆ ಕೀಳರಿಮೆ ಮೂಡುತ್ತಿದೆ. ಇದಕ್ಕೆ ಕಾರಣವೇನು ಎಂದು ಕೇಳುತ್ತಾನೆ. ಅದಕ್ಕೆ ಆ ಗುರುಗಳು, ಈಗ ನನ್ನ ಶಿಷ್ಯರು ನನ್ನ ಜೊತೆ ಇದ್ದಾರೆ, ನಿನ್ನ ಈ ಪ್ರಶ್ನೆಗೆ ನಾನು ರಾತ್ರಿ ಉತ್ತರಿಸುತ್ತೇನೆ ಎನ್ನುತ್ತಾರೆ.
ರಾತ್ರಿ ಹುಣ್ಣಿಮೆ ಬೆಳಕಲ್ಲಿ ಕುಳಿತು ಇಬ್ಬರೂ ಮಾತನಾಡುತ್ತಿರುತ್ತಾರೆ. ಆಗ ಗುರುಗಳು, ಇಲ್ಲಿ ನೋಡು ಒಂದು ದೊಡ್ಡ ಮರವಿದೆ ಮತ್ತೊಂದು ಸಣ್ಣ ಮರವಿದೆ. ನಾನು ಈ ಮನೆಗೆ ಬಂದಾಗಿನಿಂದ ಈ ಮರಗಳನ್ನು ನೋಡುತ್ತಿದ್ದೇನೆ. ಒಂದು ದಿನವೂ ಈ ಸಣ್ಣ ಮರ ದೊಡ್ಡ ಮರಕ್ಕೆ ತಾನು ನಿನಗಿಂತ ಏಕೆ ಸಣ್ಣಗಿದ್ದೇನೆ..? ನಿನ್ನ ಎತ್ತರವನ್ನು ನೋಡಿ, ನನಗೆ ತುಚ್ಛ ಭಾವನೆ ಮೂಡುತ್ತಿದೆ ಎಂದು ಯಾವಾಗಲೂ ಹೇಳಲಿಲ್ಲ ಎನ್ನುತ್ತಾರೆ.
ಈ ವಿಷಯವನ್ನ ಗಮನದಲ್ಲಿಟ್ಟುಕೊಂಡರೆ ನೀವು ಲೀಡರ್ ಆಗುವುದನ್ನ ಯಾರೂ ತಡೆಯಲಾಗುವುದಿಲ್ಲ..
ಅದಕ್ಕೆ ಕರಾಟೆ ಪಟು, ಅರೇ ಇದೇನು ಮಾತನಾಡುತ್ತಿದ್ದೀರಿ..? ಮರಗಳು ಮಾತನಾಡಲು ಹೇಗೆ ಸಾಧ್ಯ..? ಮತ್ತು ಅದರ ಹೋಲಿಕೆ ಹೇಗೆ ಮಾಡುತ್ತೀರಿ. ಅದು ಆ ಮರದ ಬೆಳವಣಿಗೆಗೆ ಬಿಟ್ಟಿದ್ದು, ಅದನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾನೆ. ಅದಕ್ಕೆ ಗುರುಗಳು, ನೋಡು ಅದು ಚಿಕ್ಕವಿರುವುದು ಮತ್ತು ಎತ್ತರವಿರುವುದು ಅದರದರ ಬೆಳವಣಿಗೆಗೆ ಬಿಟ್ಟಿದ್ದು, ಅದನ್ನು ಹೋಲಿಕೆ ಮಾಡಲಾಗುವುದಿಲ್ಲ ಎಂದು ನೀನೇ ಹೇಳಿದ್ದಿ. ಅದೇ ರೀತಿ, ನೀನು ಕರಾಟೆ ಪಟುವಾಗಿದ್ದಿ, ಕರಾಟೆ ಪಟುವಾಗಿಯೇ ಇರುತ್ತಿ. ನಾನು ಗುರುವಾಗಿದ್ದೇನೆ. ಗುರುವಾಗಿಯೇ ಇರುತ್ತೇನೆ. ನನಗೂ ನಿನಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ.
ಎಲ್ಲರೂ ಉತ್ತಮರೇ ಎನ್ನಲು ಸಾಧ್ಯವಿಲ್ಲ. ಒಬ್ಬೊಬ್ಬರಲ್ಲಿ ಒಂದೊಂದು ಅತ್ಯುತ್ತಮ ಗುಣವಿರುತ್ತದೆ. ಕೆಲವರು ವಿದ್ಯಾಭ್ಯಾಸದಲ್ಲಿ ಮುಂದಿರುತ್ತಾರೆ. ಇನ್ನು ಕೆಲವರು ಅಡುಗೆ ಮಾಡುವುದರಲ್ಲಿ ಮುಂದಿರುತ್ತಾರೆ. ಮತ್ತೆ ಕೆಲವರು ಸ್ಪೋರ್ಟ್ಸ್ ನಲ್ಲಿ ಮುಂದಿರುತ್ತಾರೆ. ಹಾಗಾಗಿ ಒಬ್ಬರನ್ನ ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಬಾರದು. ಬದಲಾಗಿ ಅವರಲ್ಲಿರುವ ಟ್ಯಾಲೆಂಟನ್ನ ನಾವು ಸಮ್ಮಾನಿಸಬೇಕು.