ನಾವು ಹಿಂದೂ ಧರ್ಮದ ಪೌರಾಣಿಕ ಕಥೆಗಳನ್ನ ಓದಿದ್ದೇವೆ. ಕೇಳಿದ್ದೇವೆ. ಎಲ್ಲದರಲ್ಲೂ ದೇವತೆಗಳು ಮತ್ತು ರಾಕ್ಷಸರು ಕಾದಾಡಿದ್ದನ್ನ, ದೇವತೆಗಳು ರಾಕ್ಷಸರಿಗೆ ಶಾಪ ಕೊಟ್ಟಿದ್ದರ ಬಗ್ಗೆ ಅಷ್ಟೇ ಕೇಳಿದ್ದೆವು. ಆದ್ರೆ ಶ್ರೀರಾಮನ ಕಥೆಯೊಂದರಲ್ಲಿ ಕಬಂಧ ರಾಕ್ಷಸ, ಶ್ರೀರಾಮನಿಗೆ ಸಹಾಯ ಮಾಡಿದ್ದನೆಂದು ಹೇಳಲಾಗಿದೆ. ಅದೇ ರೀತಿ ಶ್ರೀರಾಮ, ಆ ರಾಕ್ಷಸನ ಉದ್ಧಾರ ಮಾಡಿದ್ದನಂತೆ. ಹಾಗಾದ್ರೆ ಈ ಕಥೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ರಾಮ, ಲಕ್ಷ್ಮಣರಿಲ್ಲದ ಸಮಯದಲ್‌ಲಿ ರಾವಣ ವೇಷ ಮರೆಸಿ ಬಂದು, ಸೀತೆಯನ್ನು ಕರೆದೊಯ್ದ. ಆದ್ರೆ ಮಾರ್ಗಮಧ್ಯೆ ಜಟಾಯು, ಸೀತೆಯನ್ನು ಬಿಡುವಂತೆ, ರಾವಣನ ಬಳಿ ಸೆಣಸಾಡಿದ. ಆದರೆ ಜಟಾಯುವಿನ ರೆಕ್ಕೆಯನ್ನ ಕತ್ತರಿಸಿದ ರಾವಣ ಹೊರಟು ಹೋದ. ಇತ್ತ ಸೀತೆಯನ್ನು ಹುಡುಕುತ್ತ, ರಾಮ ಮತ್ತು ಲಕ್ಷ್ಮಣ ಬರುವಾಗ, ಅವರು ಜಟಾಯುವನ್ನು ಕಾಣುತ್ತಾರೆ. ಮತ್ತು ಜಟಾಯುವಿನ ಈ ಸ್ಥಿತಿಗೆ ಕಾರಣವೇನೆಂದು ಕೇಳುತ್ತಾರೆ. ಜಟಾಯು ನಡೆದ ಘಟನೆಯ ಬಗ್ಗೆ ಹೇಳುತ್ತಾನೆ. ಮತ್ತು ಪ್ರಾಣತ್ಯಾಗ ಮಾಡುತ್ತಾನೆ. ಇದಾದ ಬಳಿಕ, ರಾಮ ಲಕ್ಷ್ಮಣರು ಜಟಾಯುವಿನ ಅಂತಿಮ ಸಂಸ್ಕಾರ ಮಾಡುತ್ತಾರೆ.
ಇದಾದ ಬಳಿಕ ಮತ್ತೆ ಸೀತೆಯನ್ನು ಹುಡುಕಲು ಹೊರಟರು. ಈ ವೇಳೆ ಮಾರ್ಗಮಧ್ಯೆ ಅವರಿಗೆ ಕಬಂಧನೆಂಬ ರಾಕ್ಷಸ ಕಂಡ. ಅವನಿಗೆ ಮುಖವಿರಲಿಲ್ಲ. ಅವನ ಎದೆ ಮತ್ತು, ಹೊಟ್ಟೆಯ ಭಾಗದಲ್ಲಿ ಕಣ್ಣು ಮೂಗು, ಬಾಯಿ ಇತ್ತು. ಅವನಿಗೆ ಒಂದೇ ಕಣ್ಣಿತ್ತು. ಯಾರು ಈ ಕಬಂಧ ರಾಕ್ಷಸನೆಂದರೆ, ಗಂಧರ್ವ ವಂಶದಲ್ಲಿ ಹುಟ್ಟಿದ ಮಗುವೇ ಕಬಂಧ ರಾಕ್ಷಸ. ಇವನ ಮೊದಲ ಹೆಸರು ಧನು ಎಂದಿತ್ತು.
ಇವನು ಬಾಲ್ಯದಿಂದಲೇ ಆಕರ್ಷಕ ಮತ್ತು ಬಲಶಾಲಿಯಾಗಿದ್ದ. ಅಲ್ಲದೇ ಇವನನ್ನು ಯಾರೂ ಯಾವುದೇ ಅಸ್ತ್ರ ಬಳಸಿ ಕೊಲ್ಲಲಾಗುವುದಿಲ್ಲವೆಂದು ಬ್ರಹ್ಮನಿಂದ ವರ ಸಿಕ್ಕಿತ್ತು. ಈ ವರ ಸಿಕ್ಕ ಬಳಿಕ ಅವನ ಅಹಂಕಾರ ಹೆಚ್ಚಿತ್ತು. ತನ್ನದು ಸುಂದರ ದೇಹವಾಗಿದ್ದರೂ ಕೂಡ, ಅವನು ರಾಕ್ಷಸ ರೂಪ ಧರಿಸಿ, ಋಷಿಮುನಿಗಳಿಗೆ ಉಪಟಳ ನೀಡಲು ಪ್ರಾರಂಭಿಸಿದ್ದ.
ಓರ್ವ ಶಕ್ತಿಶಾಲಿ ಮುನಿಗಳ ಎದುರಿಗೆ ಹೀಗೆ ಅಹಂಕಾರ ತೋರಿಸಿದ. ಅವರಿಗೆ ಕೋಪ ಬಂದು, ನೀನು ನಿನ್ನ ಚೆಂದದ ರೂಪ ಬಿಟ್ಟು, ಈ ರಾಕ್ಷಸ ವೇಷ ಧರಿಸಿ ಎಲ್ಲರಿಗೂ ತೊಂದರೆ ಕೊಡುತ್ತಿದ್ದೀಯ. ನಿನ್ನ ಚೆಂದದ ರೂಪ ನಾಶವಾಗಲಿ. ನೀನಿಗ ಯಾವ ರೂಪದಲ್ಲಿದ್ದೀಯೋ, ಅದೇ ರೂಪ ನಿನ್ನದಾಗಲಿ ಎಂದು ಅವರು ಶಾಪ ನೀಡುತ್ತಾರೆ. ಹಾಗಾಗಿ ಧನು ಕಬಂಧ ರಾಕ್ಷಸನಾಗಿ ಉಳಿದು ಬಿಡುತ್ತಾನೆ.
ಅಲ್ಲದೇ, ಅವನಲ್ಲಿರುವ ದಿವ್ಯ ಶಕ್ತಿ ಹೊರಟುಹೋಗುತ್ತದೆ. ಅವನು ರಾಕ್ಷಸನಾಗಿ ಮಾರ್ಪಾಡಾಗುತ್ತಾನೆ. ತನ್ನಲ್ಲಿ ಈ ಬದಲಾವಣೆ ಕಂಡು, ಧನುವಿಗೆ ಪಶ್ಚಾತಾಪವಾಗುತ್ತದೆ. ಅವನು ಆ ಮುನಿಗಳ ಬಳಿ, ತನ್ನ ತಪ್ಪಿಗೆ ಕ್ಷಮೆ ಕೇಳುತ್ತಾನೆ. ಮತ್ತು ಈ ರೂಪದಿಂದ ಮುಕ್ತಿ ಕೊಡುವಂತೆ ಕೇಳುತ್ತಾನೆ. ಆಗ ಮುನಿಗಳು, ಇನ್ನು ಕೆಲ ವರ್ಷಗಳ ಬಳಿಕ ರಾಮ ಲಕ್ಷ್ಮಣರು ಸೀತೆಯನ್ನು ಹುಡುಕಿಕೊಂಡು ಈ ಕಾಡಿಗೆ ಬರುತ್ತಾರೆ. ಮತ್ತು ಅವರು ನಿನ್ನ ಎರಡೂ ಭುಜಗಳನ್ನು ಕತ್ತರಿಸಿ, ನಿನ್ನ ಅಂತ್ಯಸಂಸ್ಕಾರ ಮಾಡುತ್ತಾರೆ. ಇದಾದ ಬಳಿಕ ನೀನು ಪುನಃ ಧನುವಿನ ರೂಪಕ್ಕೆ ಬರುತ್ತಿಯಾ ಎಂದು ಹೇಳುತ್ತಾರೆ. ಇದರ ಮುಂದಿನ ಕಥೆಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ..