ನೀವು ನಾರ್ಮಲ್ ಖಿಚಡಿ, ರೈಸ್ ಭಾತ್, ಪುಳಿಯೋಗರೆ, ಪಲಾವ್, ಪೊಂಗಲ್ ಈ ಎಲ್ಲ ಅನ್ನದ ತಿಂಡಿಯನ್ನ ತಿಂದಿರ್ತೀರಿ. ಆದ್ರೆ ವೆಜ್ ಮಸಾಲಾ ಖಿಚಡಿ ತಿಂದಿರೋದು ಅಪರೂಪವಾಗಿರಬಹುದು. ಯಾಕಂದ್ರೆ ಇದು ಗುಜರಾತಿ ಡಿಶ್. ನಾವಿಂದು ಈ ತಿಂಡಿ ಮಾಡೋದು ಹೇಗೆ..? ಇದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ಹೇಳಲಿದ್ದೇವೆ..
ಬೇಕಾಗುವ ಸಾಮಗ್ರಿ: 1 ಕಪ್ ಹೆಸರು ಬೇಳೆ, 1 ಕಪ್ ಅಕ್ಕಿ, ಕಾಲು ಕಪ್ ಸಾಸಿವೆ ಎಣ್ಣೆ, 4 ಸಿಪ್ಪೆ ತೆಗೆದು ತುಂಡರಿಸಿದ 4 ಆಲೂಗಡ್ಡೆ, ಅರ್ಧ ಕಪ್ ಹೂಕೋಸು, 1 ಕ್ಯಾರೆಟ್, 2 ಪಲಾವ್ ಎಲೆ, 2 ಲವಂಗ, 2 ಏಲಕ್ಕಿ, ಒಣಮೆಣಸು, ಅರ್ಧ ಸ್ಪೂನ್ ಜೀರಿಗೆ, ಅರ್ಧ ಸ್ಪೂನ್ ಶುಂಠಿ ಪೇಸ್ಟ್, 2 ಸಣ್ಣಗೆ ಕತ್ತರಿಸಿದ ಟೊಮೆಟೋ, ಕೊಂಚ ಅರಿಶಿನ, 1 ಸ್ಪೂನ್ ಖಾರದ ಪುಡಿ, 1 ಸ್ಪೂನ್ ಧನಿಯಾ ಪುಡಿ ಮತ್ತು ಗರಂ ಮಸಾಲೆ, 2 ಸ್ಪೂನ್ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲು ಹೆಸರು ಬೇಳೆಯನ್ನ ಪ್ಯಾನ್‌ಗೆ ಹಾಕಿ ಹುರಿಯಿರಿ. ಮಧ್ಯಮ ಉರಿಯಲ್ಲಿ 5 ನಿಮಿಷ ಇದನ್ನು ಹುರಿಯಬೇಕು. ಇದಾದ ಬಳಿಕ ಹೆಸರು ಬೇಳೆಯನ್ನು ತೊಳೆಯಬೇಕು. ನಂತರ ಅಕ್ಕಿಯನ್ನು ಸ್ವಚ್ಛವಾಗಿ ತೊಳೆದು, ಹುರಿಯಬೇಕು.
ನಂತರ ಆ ಪ್ಯಾನ್‌ಗೆ 2 ಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿ, ಮೊದಲು ಆಲೂಗಡ್ಡೆ ಹುರಿಯಿರಿ. ನಂತರ ಹೂಕೋಸು, ನಂತರ ಕ್ಯಾರೆಟ್ ಹುರಿಯಿರಿ. ಇವನ್ನೆಲ್ಲ ಹುರಿದು ಪಕ್ಕಕ್ಕಿರಿಸಿ. ಬಳಿಕ ಅದೇ ಪ್ಯಾನ್‌ಗೆ ಮತ್ತೆ 2 ಸ್ಪೂನ್ ಎಣ್ಣೆ ಹಾಕಿ, ಪಲಾವ್ ಎಲೆ, ಏಲಕ್ಕಿ, ಲವಂಗ, ಮೆಣಸು, ಜೀರಿಗೆ, ಶುಂಠಿ ಪೇಸ್ಟ್ ಹಾಕಿ ಚೆನ್ನಾಗಿ ಹುರಿಯಿರಿ. ಇದಕ್ಕೆ ಟೊಮೆಟೋ ಹಾಕಿ ಹುರಿದು, ಬಳಿಕ ಅರಿಶಿನ, ಧನಿಯಾ ಪುಡಿ, ಖಾರದ ಪುಡಿ, ಗರಂ ಮಸಾಲೆ, ಉಪ್ಪು ಸೇರಿಸಿ ಮತ್ತೆ ಹುರಿಯಿರಿ. ನಂತರ ಹುರಿದ ತರಕಾರಿ ಮತ್ತು ಅಕ್ಕಿ-ಬೇಳೆಯನ್ನ ಸಹ ಸೇರಿಸಿ ಹುರಿಯಿರಿ. ಈಗ ಅವಶ್ಯಕತೆ ಇದ್ದಷ್ಟು ನೀರು ಹಾಕಿ, ಪ್ಯಾನ್ ಮುಚ್ಚಳ ಮುಚ್ಚಿ, ಚೆನ್ನಾಗಿ ಬೇಯಿಸಿದರೆ, ಖಿಚಡಿ ರೆಡಿ. ಇದಕ್ಕೆ ತುಪ್ಪ ಹಾಕಿ ಸವಿಯಿರಿ.