ಮೆಂತ್ಯೆ ಕಾಳನ್ನ ಪ್ರತಿದಿನ ನಮ್ಮ ಊಟ- ತಿಂಡಿಯಲ್ಲಿ ಬಳಸಿದರೆ, ಅದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಅಲ್ಲದೇ, ಸೌಂದರ್ಯವೂ ಕಾಪಾಡಿಕೊಳ್ಳಬಹುದು. ಇಂದು ನಾವು ಮೆಂತ್ಯೆ ಬಳಸಿ ಹೇಗೆ ಆರೋಗ್ಯ ಮತ್ತು ಕೂದಲ ಕಾಂತಿಯನ್ನ ಕಾಪಾಡಿಕೊಳ್ಳಬಹುದು ಅಂತಾ ಹೇಳಲಿದ್ದೇವೆ.
ಮೊದಲನೇಯದಾಗಿ ಮೆಂತ್ಯೆ ನೀರು. ರಾತ್ರಿ 10 ಕಾಳು ಮೆಂತ್ಯೆಯನ್ನ ನೀರಿನಲ್ಲಿ ನೆನೆಸಿಟ್ಟು, ಆ ನೀರನ್ನ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಮತ್ತು ಆ ಮೆಂತ್ಯೆ ಕಾಳನ್ನು ಸಲಾಡ್ಗೆ ಸೇರಿಸಿ, ಅಥವಾ ಸಾರು, ಪಲ್ಯಕ್ಕೆ ಸೇರಿಸಿ ತಿನ್ನಬಹುದು. ಇನ್ನು ಕೂದಲ ಆರೋಗ್ಯಕ್ಕಾಗಿ ನೀವು ನೆನೆಸಿಟ್ಟ ಮೆಂತ್ಯೆ ಕಾಳಿನ ನೀರನ್ನು ಸ್ಪ್ರೇ ಬಾಟಲಿಯ ಸಹಾಯದಿಂದ ನಿಮ್ಮ ಕೂದಲಿಗೆ ಸಿಂಪಡಿಸಿ. ಬಳಿಕ ಮಧ್ಯಾಹ್ನದ ಹೊತ್ತು ತಲೆಸ್ನಾನ ಮಾಡಿ.
ಎರಡನೇಯದಾಗಿ, ಸಾರಿಗೆ ಮಸಾಲೆ ರುಬ್ಬುವಾಗ ಅದಕ್ಕೆ ಮೆಂತ್ಯೆಯನ್ನು ನೆನೆಸಿ, ಅಥವಾ ಹುರಿದು ಪುಡಿ ಮಾಡಿ ಬಳಸಬಹುದು. ಅಥವಾ ಮೆಂತ್ಯೆಯನ್ನು ಹುರಿದು, ಪುಡಿ ಮಾಡಿ ಬಳಸಬಹುದು. ಕೊಂಚ ಮೆಂತ್ಯೆ ಪುಡಿ, ಉಪ್ಪು ಮತ್ತು ತುಪ್ಪವನ್ನು ಬಿಸಿ ಬಿಸಿ ಅನ್ನಕ್ಕೆ ಬೆರೆಸಿ ತಿಂದರೆ, ನಿಮಗೆ ಹೊಟ್ಟೆನೋವಿನ ಸಮಸ್ಯೆ ಬರುವುದಿಲ್ಲ. ಆದರೆ ಅತೀಯಾಗಿ ಮೆಂತ್ಯೆ ಅಥವಾ ಮೆಂತ್ಯೆ ಪುಡಿ ಬಳಸಿದ್ದಲ್ಲಿ, ನೀವು ಮಲಬದ್ಧತೆ ಸಮಸ್ಯೆಗೆ ಗುರಿಯಾಗಬೇಕಾಗುತ್ತದೆ. ಹಾಗಾಗಿ ಮೆಂತ್ಯೆಯನ್ನ ಮಿತವಾಗಿ ಬಳಸಿ, ಆರೋಗ್ಯ ಕಾಪಾಡಿಕೊಳ್ಳಿ.
ಮೂರನೇಯದಾಗಿ ಒಂದು ಸ್ಪೂನ್ ಮೆಂತ್ಯೆಯನ್ನು ನೀರಿನಲ್ಲಿ ನೆನೆಸಿಟ್ಟು, ಮರುದಿನ ಮೊಸರು, ಮೆಂತ್ಯೆ, ದಾಸವಾಳ ಎಲೆ ಮತ್ತು ಹೂವನ್ನು ಸೇರಿಸಿ, ಪೇಸ್ಟ್ ಮಾಡಿ. ಈ ಹೇರ್ ಪ್ಯಾಕ್ ಹಾಕಿ, ಇದು ಒಣಗಿನ ಬಳಿಕ, ಕೆಮಿಕಲ್ ಇಲ್ಲದ ಶ್ಯಾಂಪೂ ಅಥವಾ ಸೀಗೇಕಾಯಿ ಪುಡಿ ಬಳಸಿ, ತಲೆ ಸ್ನಾನ ಮಾಡಿ. ವಾರಕ್ಕೊಮ್ಮೆ ಈ ಹೇರ್ ಪ್ಯಾಕ್ ಹಾಕಿ ತಲೆ ಸ್ನಾನ ಮಾಡಿದ್ದಲ್ಲಿ, ನಿಮ್ಮ ಕೂದಲಿನ ಆರೋಗ್ಯ ಉತ್ತಮವಾಗಿರುತ್ತದೆ. ಆದರೆ ಈ ಹೇರ್ ಪ್ಯಾಕ್ ತಯಾರಿಸುವಾಗ, ಮೆಂತ್ಯೆ ಸರಿಯಾಗಿ ರುಬ್ಬಿಕೊಳ್ಳಿ. ಮೆಂತ್ಯೆ ಕಾಳು ಅರ್ದಂಬರ್ಧ ಪೇಸ್ಟ್ ಆದರೆ, ಅದು ತಲೆಕೂದಲಿಗೆ ಅಂಟಿಕೊಂಡು, ಕೂದಲು ಉದುರುತ್ತದೆ.




