ರಷ್ಯಾ ಉಕ್ರೇನ್ (Russia,Ukraine) ವಿರುದ್ಧ ಯುದ್ಧವನ್ನು ಘೋಷಣೆ (Declaration of war) ಮಾಡಿದ್ದು, ಅಲ್ಲಿನ ಪರಿಸ್ಥಿತಿ ಈಗ ಬಿಗಡಾಯಿಸಿದೆ. 20 ಸಾವಿರಕ್ಕೂ ಹೆಚ್ಚು ಭಾರತೀಯರು (Indians), ಹಾಗೂ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಇದ್ದು, ಈಗ ಅವರು ಸ್ವದೇಶಕ್ಕೆ ಬರಲು ಹರಸಾಹಸ ಪಡುತ್ತಿದ್ದಾರೆ. ರಷ್ಯಾ ಹಾಗೂ ಉಕ್ರೇನ್ ನಡುವೆ ಉಂಟಾಗಿರುವ ಬಿಕ್ಕಟ್ಟಿನಿಂದ ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ಭಯ ಭೀತಿಯನ್ನುಂಟು ಮಾಡಿದೆ. ಈ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಬೊಮ್ಮಾಯಿ (CM bommai) ‘ರಾಜ್ಯದ ಹತ್ತು ಹೆಚ್ಚು ವಿದ್ಯಾರ್ಥಿಗಳು ಉಕ್ರೇನ್ ಏರ್‌ಪೋರ್ಟ್ (Ukraine Airport)ನಲ್ಲಿ ಸಿಲುಕಿದ್ದಾರೆ. ಅವರ ರಕ್ಷಣೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಉಕ್ರೇನ್ ರಾಯಭಾರಿ ಕಚೇರಿಗೆ ವಿದ್ಯಾರ್ಥಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ’ ಎಂದು ಅವರು ಹೇಳಿದ್ದಾರೆ. ಯುದ್ಧ ಆರಂಭಕ್ಕೂ ಮೊದಲೇ ತಂಡ ತಂಡವಾಗಿ ಕರೆಸಿಕೊಳ್ಳಲಾಗುತ್ತಿತ್ತು. ಆದರೆ, ಈಗ ಉಳಿದಿರುವ ಸುಮಾರು 100 ವಿದ್ಯಾರ್ಥಿಗಳು ಕೊನೆಯ ತಂಡವಾಗಿತ್ತು. ಭಾರತಕ್ಕೆ ವಾಪಸಾಗಲು ಬಹುತೇಕ ವಿದ್ಯಾರ್ಥಿಗಳು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಯುದ್ಧ ಆರಂಭವಾದ ಕಾರಣ ಅಲ್ಲೇ ಸಿಲುಕಿದ್ದಾರೆ. ನೂರು ಮಂದಿ ಭಾರತೀಯ ವಿದ್ಯಾರ್ಥಿಗಳಲ್ಲಿ ಹತ್ತು ಜನ ರಾಜ್ಯದವರಾಗಿದ್ದಾರೆ. ಇವರನ್ನ ದೇಶಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ ಎಂದು ಬೊಮ್ಮಾಯಿ ಹೇಳಿದರು. ನಮ್ಮ ವಿದೇಶಾಂಗ ಕಾರ್ಯದರ್ಶಿ ಜೊತೆ ಸಂಪರ್ಕದಲ್ಲಿದ್ದೇವೆ. ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರಿ ಕೂಡ ಅಲ್ಲಿನ ಅಧಿಕಾರಿಗಳಿಗೆ ಮಾಹಿತಿಯನ್ನೂ ಕೊಟ್ಟಿದ್ದಾರೆ. ಅವರು ವಿದ್ಯಾರ್ಥಿಗಳ ಸಂಪರ್ಕದಲ್ಲಿದ್ದಾರೆ. ಯಾವುದು ಸುರಕ್ಷಿತ ಸ್ಥಳ ಎಂಬ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದು ವಿವರಿಸಿದರು.