Health Tips: ಧೂಮಪಾನ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಹಾನಿಕಾರಕ ಅನ್ನೋದು ಎಲ್ಲರಿಗೂ ಗೊತ್ತು. ಅದನ್ನು ಸೇದುವವರಿಗೂ ಗೊತ್ತು. ಏಕೆಂದರೆ, ಸಿಗರೇಟ್ ಪ್ಯಾಕೇಟ್ ಮೇಲೆಯೇ ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಬರೆದಿರುತ್ತಾರೆ. ಆದರೂ ಸೇದುತ್ತಾರೆ. ಆದರೆ ಇದು ಬರೀ ಧೂಮಪಾನ ಮಾಡುವವರ ಮೇಲಷ್ಟೇ ಅಲ್ಲ, ಬದಲಾಗಿ ಅವರ ಸುತ್ತಮುತ್ತಲಿರುವವರ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಅದರಲ್ಲೂ ಗರ್ಭಿಣಿಯರು ಧೂಮಪಾನ ಮಾಡುವವರ ಬಳಿ ಹೋಗಲೇಬಾರದು. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯೋಣ ಬನ್ನಿ..
ಮನೆಯಲ್ಲಿ ಪತಿ, ಅಪ್ಪ ಅಥವಾ ಮಾವ ಅಥವಾ ಯಾರೋ ಸಂಬಂಧಿಕರು ಪ್ರತಿದಿನ ಧೂಮಪಾನ ಮಾಡುತ್ತಿದ್ದು, ಗರ್ಭಿಣಿಯಾದವಳು ಅವರ ಅಕ್ಕಪಕ್ಕದಲ್ಲೇ ಕುಳಿತಿದ್ದರೆ, ಆ ಧೂಮಪಾನದ ಹೊಗೆಯನ್ನು ತೆಗೆದುಕೊಳ್ಳುತ್ತಿದ್ದರೆ, ಅದರಿಂದ ಆಕೆಯ ಮತ್ತು ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಗುವಿಗೆ ಉಸಿರಾಟದ ಸಮಸ್ಯೆ ಬರುತ್ತದೆ.
ಅಲ್ಲದೇ ಮಗುವಿನ ಬೆಳವಣಿಗೆಯೂ ಕುಂಠಿತವಾಗುತ್ತದೆ. ಇನ್ನು ನಿಮ್ಮ ಮನೆಯಲ್ಲಿರುವವರು ಚೈನ್ ಸ್ಮೋಕರ್ ಆಗಿದ್ದರೆ, ಆ ಹೊಗೆ ನೀವು ತೆಗೆದುಕೊಂಡರೆ, ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ, ಮಗುವಿನ ತೂಕವೂ ಸರಿಯಾಗಿರುವುದಿಲ್ಲ. ಗರ್ಭಿಣಿಯ ಹೊಟ್ಟೆಯಲ್ಲಿ ರಕ್ತಸ್ರಾವವಾಗಿ, ಮಗುವಿನ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುವ ಕಾರಣಕ್ಕೆ, ಗರ್ಭಿಣಿಯರು ಧೂಮಪಾನ ಮಾಡುವವರ ಹತ್ತಿರ ಕುಳಿತುಕೊಳ್ಳಬಾರದು.
ಇಷ್ಟೇ ಅಲ್ಲದೇ, ಗರ್ಭಿಣಿಯಾದವಳು ಧೂಮಪಾನದ ಹೊಗೆ ತೆಗೆದುಕೊಂಡರೆ, ಮಗುವಿನ ಅಂಗಾಂಗಗಳು ಸರಿಯಾಗಿ ಬೆಳವಣಿಗೆ ಹೊಂದದೇ, ಮಗು ಅಂಗವಿಕಲವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಗರ್ಭಿಣಿಯರು ಧೂಮಪಾನ ಮಾಡುವವರ ಹತ್ತಿರ ಎಂದಿಗೂ ಕೂರಬೇಡಿ. ಇನ್ನು ಕೆಲ ಮಹಿಳೆಯರಿಗೇ ಧೂಮಪಾನ ಮಾಡುವ ಅಭ್ಯಾಸವಿರುತ್ತದೆ. ಅಂಥವರಿಗೆ ಮಕ್ಕಳಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಆದರೆ ಅಂಥವರೇನಾದರೂ ತಾಯಿಯಾಗುತ್ತಿದ್ದರೆ, ಅವರು ಕೂಡ ಧೂಮಪಾನ ಮಾಡುವ ಚಟವನ್ನು ಬಿಡಲೇಬೇಕು. ಇಲ್ಲವಾದಲ್ಲಿ, ಹುಟ್ಟುವ ಮಗು ಅನಾರೋಗ್ಯದಿಂದ ಕೂಡಿರುತ್ತದೆ.