Health Tips: ಇಂದಿನ ಕಾಲದಲ್ಲಿ ನಾರ್ಮಲ್ ಡಿಲೆವರಿಯಾಗಿದೆ ಎಂದರೆ, ಅದೇ ಮಹಾ ಸಾಧನೆಯಂತಾಗಿದೆ. ಏಕೆಂದರೆ, ಹಲವು ಕಾರಣಗಳಿಂದ ಸಿಸೇರಿನ್ ಮಾಡಿಯೇ, ಡಿಲೆವರಿ ಮಾಡಲಾಗುತ್ತಿದೆ. ಅದಕ್ಕೆ ನಮ್ಮ ಜೀವನ ಶೈಲಿಯೂ ಕಾರಣವಾಗಿರಬಹುದು. ಹೀಗೆ ಸಿಸರೇನ್ ಆದಾಗ, ಎದೆಹಾಲು ಬರುವುದು ಕಷ್ಟವಾಗುತ್ತದೆ. ಹಾಗಾಗಿ ಹಲವರು ಅದಕ್ಕಾಗಿ ಮೆಡಿಸಿನ್ ತೆಗೆದುಕೊಳ್ಳುತ್ತಾರೆ. ಆದರೆ ಎದೆ ಹಾಲು ಹೆಚ್ಚಿಸಲು ನೀವು ಮಾತ್ರೆಯ ಸಹಾಯದ ಬದಲು, ಕೆಲ ಆಹಾರಗಳನ್ನು ಸೇವಿಸಬೇಕಾಗುತ್ತದೆ. ಹಾಗಾದ್ರೆ ಯಾವುದು ಆ ಆಹಾರಗಳು ಅಂತಾ ತಿಳಿಯೋಣ ಬನ್ನಿ..
ಬಿಸಿ ನೀರು. ಬಾಣಂತಿಯಾದವಳು ಪ್ರತಿದಿನ ಎಷ್ಟಾಗುತ್ತದೆಯೋ ಅಷ್ಟು, ಬಿಸಿ ನೀರನ್ನು ಕುಡಿಯಬೇಕು. ಇದರಿಂದ ಎದೆ ಹಾಲು ಹೆಚ್ಚುವುದಲ್ಲದೇ, ಮಲಬದ್ಧತೆ ಸಮಸ್ಯೆಯೂ ದೂರವಾಗುತ್ತದೆ. ಅಲ್ಲದೇ ಬಿಸಿ ನೀರಿನ ಸೇವನೆಯಿಂದ, ಬಾಣಂತಿಗೆ ಜ್ವರ, ನೆಗಡಿ, ಕೆಮ್ಮು ಯಾವುದೂ ಬರುವುದಿಲ್ಲ.
ಸಬ್ಬಸಿಗೆ ಸೊಪ್ಪು. ಗರ್ಭಿಣಿಯರು ಸಬ್ಬಸಿಗೆ ಸೊಪ್ಪನ್ನು ತಿನ್ನಬಾರದು. ಆದರೆ ಬಾಣಂತಿಯಾದ ಬಳಿಕ ಹೆಚ್ಚು ಸಬ್ಬಸಿಗೆ ಸೊಪ್ಪನ್ನು ತಿನ್ನಬೇಕು. ಇದರಿಂದ ಎದೆ ಹಾಲು ಹೆಚ್ಚುತ್ತದೆ. ಮತ್ತು ಈ ಸೊಪ್ಪು ಆರೋಗ್ಯಕ್ಕೂ ತುಂಬಾ ಉತ್ತಮ. ಆದರೆ ಇದನ್ನು ಸೇವಿಸುವ ಮುನ್ನ, ಚೆನ್ನಾಗಿ ತೊಳೆದು, ಸ್ವಚ್ಛಗೊಳಿಸಿ, ಸೇವಿಸಬೇಕು.
ಹಸುವಿನ ಹಾಲು. ಹಸುವಿನ ಹಾಲನ್ನು ಚೆನ್ನಾಗಿ ಕಾಯಿಸಿ, ಬಿಸಿ ಬಿಸಿ ಹಾಲನ್ನು ಕುಡಿಯುವುದರಿಂದ, ಬಾಣಂತಿಗೆ ಎದೆ ಹಾಲು ಹೆಚ್ಚುತ್ತದೆ. ಅಂಥ ಹಾಲು ಕುಡಿದ ಮಗುವೂ ಆರೋಗ್ಯವಾಗಿರುತ್ತದೆ. ಆದರೆ ಹುಟ್ಟಿದ ಶಿಶುವಿಗೆ ಹಸುವಿನ ಹಾಲನ್ನು ಕುಡಿಸುವುದು ಉತ್ತಮವಲ್ಲ. ಇದು ಮಗುವಿನ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಹಾಗಾಗಿ ಹಸುವಿನ ಹಾಲನ್ನು ತಾಯಿ ಕುಡಿದು, ತಾಯಿಯ ಹಾಲನ್ನು ಮಗುವಿಗೆ ಕೊಡಬೇಕು.
ಮೆಂತ್ಯೆ. ಮೆಂತ್ಯೆ ಕಾಳಿನ ಸೇವನೆಯಿಂದ ಎದೆ ಹಾಲು ಹೆಚ್ಚಾಗುತ್ತದೆ. ಮೆಂತ್ಯೆಯಿಂದ ಮಾಡಿದ ಪದಾರ್ಥಗಳನ್ನು ಮಿತವಾಗಿ ಸೇವಿಸಿ, ಬೆಚ್ಚಗಿನ ನೀರು ಕುಡಿಯಬೇಕು. ಇಲ್ಲವಾದಲ್ಲಿ, ಮಲಬದ್ಧತೆಯಾಗುವ ಸಾಧ್ಯತೆ ಇರುತ್ತದೆ.
ಕೊನೆಯದಾಗಿ ಚೆನ್ನಾಗಿ ನಿದ್ರಿಸಬೇಕು. ಬಾಣಂತಿ ಉತ್ತಮ ಆರೈಕೆ, ಆರೋಗ್ಯಕರ ಊಟದೊಂದಿಗೆ, ಚೆನ್ನಾಗಿ ನಿದ್ರಿಸಿದಾಗಲೇ ಆಕೆಯ ಎದೆ ಹಾಲು ಹೆಚ್ಚುತ್ತದೆ. ಅಲ್ಲದೇ, ಆಕೆ ಆರೋಗ್ಯವಾಗಿರುತ್ತಾಳೆ.