Spiritual: ಆಹಾರಕ್ಕಾಗಿ ಹಲವು ಪ್ರಾಣಿಗಳನ್ನು ತಿನ್ನುವುದನ್ನ ನಾವು ಕೇಳಿರುತ್ತೇವೆ. ನೋಡಿರುತ್ತೇವೆ. ಆದರೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ನಾಗಹತ್ಯೆ ಮಾಡಿದರೆ, ದೋಷವಂತೂ ತಾಗುತ್ತದೆ. ಅದಕ್ಕೆ ಪರಿಹಾರವೂ ಇದೆ. ಆದರೆ ನಾಗಹತ್ಯೆ ಮಾಡಿದರೆ, ಎಂಥ ದೋಷ ಅಂಟಿಕೊಳ್ಳುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ನಾಗರ ಹಾವಿಗೆ ಹಿಂದೂ ಧರ್ಮದಲ್ಲಿ ಮಹತ್ತರ ಸ್ಥಾನ ನೀಡಲಾಗಿದೆ. ಹಾಗಾಗಿಯೇ ಶ್ರಾವಣ ಮಾಸದಲ್ಲಿ ನಾಗರಪಂಚಮಿಯನ್ನು ಆಚರಿಸಲಾಗುತ್ತದೆ. ಹಿಂದೂಗಳಲ್ಲಿ ನಾಗನನ್ನು ಕೊಲ್ಲುವುದೆಂದರೆ, ಜನ್ಮ ಜನ್ಮದ ಪಾಪವನ್ನು ಸುತ್ತಿಕೊಳ್ಳುವುದು ಎಂದರ್ಥ. ಹಾಗಾಗಿ ಹಲವರು ಈ ಪಾಪ ಮಾಡಲು ಇಚ್ಛಿಸುವುದಿಲ್ಲ. ಆದರೆ ಹಲವರಿಗೆ ಅಪ್ಪಿತಪ್ಪಿ ನಾಗ ಹತ್ಯೆಯಾಗಿ ಹೋಗುತ್ತದೆ. ಇದರಿಂದ ನಾಗಹತ್ಯಾ ದೋಷ ಬರುತ್ತದೆ.
ಈ ಕಾರಣಕ್ಕೆ ಅವರ ಕುಟುಂಬಸ್ಥರಿಗೆ ಸಂತಾನಹೀನತೆ, ಚರ್ಮ ರೋಗ ಸೇರಿ ಹಲವು ಸಮಸ್ಯೆಗಳು ಬರಲಾರಂಭಿಸುತ್ತದೆ. ಹಾಗಾಗಿ ಈ ಕೆಲಸ ಮಾಡಿದವರಿಗಷ್ಟೇ ಅಲ್ಲದೇ, ಅವರ ಮುಂದಿನ ಪೀಳಿಗೆಯವರೂ ಈ ಸಮಸ್ಯೆಗೆ ಗುರಿಯಾಗಬೇಕಾಗುತ್ತದೆ. ಇನ್ನು ಬರೀ ಹಾವನ್ನು ಕೊಲ್ಲುವುದಷ್ಟೇ ಅಲ್ಲದೇ, ಹಾವಿನ ಹುತ್ತವನ್ನು ಆ ಸ್ಥಳದಿಂದ ತೆಗೆದು, ಅಲ್ಲೇ ಮನೆ ಕಟ್ಟಿಕೊಂಡು ಇರುತ್ತಾರೆ. ಅಂಥವರ ಕುಟುಂಬಕ್ಕೂ ಸಮಸ್ಯೆ ಬರುವುದು ಖಚಿತ.
ಇಂಥ ಕೆಲಸಕ್ಕೆ ಪ್ರಾಯಶ್ಚಿತವಾಗಿ, ನಾಗನಿಗೆ ವಿಶೇಷ ಪೂಜೆ ಮಾಡಿಸುತ್ತಾರೆ. ದೋಷ ತೆಗೆದು ಹಾಕಲು, ನಾಗ ಪ್ರತಿಷ್ಠಾಪನೆ, ನಾಗಬಲಿ, ಶಾಂತಿ, ಪೂಜೆ ಇವನ್ನೆಲ್ಲ ಮಾಡಲಾಗುತ್ತದೆ. ಇಂಥ ಪೂಜೆಗಳನ್ನು ಮಾಡುವ ಮೂಲಕ, ದೋಷವನ್ನು ನಿವಾರಣೆ ಮಾಡಲಾಗುತ್ತದೆ. ಆದರೆ ಈ ಪೂಜೆ ಪುನಸ್ಕಾರ ಮಾಡುವಾಗ, ಹಲವು ಪದ್ಧತಿಗಳನ್ನು ಅನುಸರಿಸಬೇಕು. ಇಂಥವರು ಶ್ಯಾವಿಗೆ, ಮ್ಯಾಗಿಯಂಥ ತಿಂಡಿಯನ್ನು ತಿನ್ನಬಾರದು. ವೃತ ಹಿಡಿದವರು ಮತ್ತು ಅವರ ಕುಟುಂಬಸ್ಥರು ಮದ್ಯ, ಮಾಂಸ, ಮೊಟ್ಟೆ ಇವನ್ನೆಲ್ಲ ತಿನ್ನಬಾರದು. ಇನ್ನೂ ಹಲವು ನಿಯಮಗಳನ್ನು ಕಟ್ಟು ನಿಟ್ಟಾಗಿ ಆಚರಿಸಿ, ಪೂಜೆ ಮಾಡಿದಾಗ ಮಾತ್ರ, ಅದರ ಫಲ ದೊರೆಯುತ್ತದೆ.