ಬಾಗಲಕೋಟೆ : ಗಣರಾಜ್ಯೋತ್ಸವ(Republic Day) ಅಂಗವಾಗಿ ಜನವರಿ 26ರಂದು ದೆಹಲಿ(delhi)ಯಲ್ಲಿ ನಡೆಯುವ ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಬಾಗಲಕೋಟೆ ಜಿಲ್ಲೆ(Bagalkot District)ಯ ಇಳಕಲ್ ಸೀರೆ (Ilkal sari) ಹಾಗೂ ಗುಳೇದಗುಡ್ಡ ಖಣ (Guledagudda khana) ( ರವಿಕೆ ) ಆಯ್ಕೆ ಮಾಡಲಾಗಿದೆ. ಇದರಿಂದ ಬಾಗಲಕೋಟೆ ಜಿಲ್ಲೆಯ ನೇಕಾರರು ಸಂಭ್ರಮಿಸುತ್ತಿದ್ದು, ಶತ-ಶತಮಾನಗಳಿಂದ ತನ್ನದೇ ಆದ ಗೌರವ ಹಾಗೂ ಬೇಡಿಕೆಯನ್ನು ಉಳಿಸಿಕೊಂಡು ಬಂದಿರುವಂತಹ ಇಳಕಲ್ ಸೀರೆ, ಗುಳೇದಗುಡ್ಡ ಖಣ, ಸ್ತಬ್ಧಚಿತ್ರಗಳ ಕರಕುಶಲ ವಸ್ತು ಪ್ರದರ್ಶನದಲ್ಲಿ ಎಲ್ಲರ ಗಮನ ಸೆಳೆಯಲಿವೆ.
“ಇಳಕಲ್ ಸೀರೆ ಉಟ್ಟುಕೊಂಡು ಮೊಳಕಾಲ್ಗಂಟ ಎತ್ಕೊಂಡು ಏರಿ ಮೇಲೆ ಏರಿಬಂದಳು ನಾರಿ ” ಎಂಬ ಹಾಡು ಯಾರಿಗೆ ಗೊತ್ತಿಲ್ಲ ಹೇಳಿ, ಇಳಕಲ್ ಸೀರೆಯ ಅಂದಕ್ಕೆ ಅದರ ಸಾಂಪ್ರದಾಯಿಕತೆಗೆ ಸಾಕ್ಷಿಯಾಗಿದೆ. ಇಳಕಲ್ ಸೀರೆಗೆ ರಾಜ್ಯ ಮಾತ್ರವಲ್ಲದೆ ದೇಶ-ವಿದೇಶಗಳಲ್ಲೂ ಬೇಡಿಕೆ ಹಾಗೂ ಹೆಸರುವಾಸಿ ಪಡೆದಿದೆ. ಇಳಕಲ್ ಸೀರೆ ನಮ್ಮ ಸಾಂಪ್ರದಾಯಿಕತೆಯ ಪ್ರತೀಕ, ಇತ್ತೀಚಿಗೆ ಇಳಕಲ್ ಸೀರೆ ಹಾಗೂ ಗುಳೇದಗುಡ್ಡ ಖಣ ಎರಡು ಆನ್ಲೈನ್ ನಲ್ಲಿ ಮಾರಾಟ(Sell online)ಹಾಗೂ ಖರೀದಿಯೂ ನಡೆಯುತ್ತಿದೆ. ಇನ್ನು ಎರಡು ವರ್ಷದಿಂದ ವ್ಯಾಪಾರ ವಹಿವಾಟಿನ ಮೇಲೆ ಕೋವಿಡ್ ದುಷ್ಪರಿಣಾಮ ನೇಕಾರರ ಮೇಲೂ ಬೀರಿದ್ದು, ಎರಡು ವರ್ಷದಿಂದ ಸರಿಯಾದ ಕಚ್ಚಾವಸ್ತು ಸಿಗದೇ, ಬಟ್ಟೆ ನೆಯಲು ಆಗದೆ, ಮಾರಾಟ ವಿಲ್ಲದೆ, ನೇಕಾರರು ಕಷ್ಟ ಅನುಭವಿಸುವಂತಾಗಿದೆ. ಗಣರಾಜ್ಯೋತ್ಸವ ಸ್ತಬ್ಧ ಚಿತ್ರ ಪ್ರದರ್ಶನದಲ್ಲಿ ಇವುಗಳನ್ನು ಆಯ್ಕೆ ಮಾಡಿದ್ದಕ್ಕೆ ನೇಕಾರ ಸಮುದಾಯದ ಮುಖಂಡ ಶಿವಲಿಂಗ ಟರ್ಕಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಗಣರಾಜ್ಯೋತ್ಸವದ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಇಳಕಲ್ ಸೀರೆ ಇನ್ನಷ್ಟು ಪ್ರಸಿದ್ಧಿ ಪಡೆದು ನೇಕಾರರ ವ್ಯಾಪಾರ-ವಹಿವಾಟು ಹೆಚ್ಚಾಗಿ ಅವರ ಬದುಕು ಹಸನಾಗಲಿ.