Navaratri Special: ಮಲೆನಾಡಿನಲ್ಲಿರುವ ಪ್ರಸಿದ್ಧ ದೇವಿ ದೇವಸ್ಥಾನಗಳಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನವೂ ಒಂದು. ದೇವಿಯ ಆಶೀರ್ವಾದ ಪಡೆದು, ಅನ್ನಪ್ರಸಾದ ಸ್ವೀಕರಿಸಿದಾಗಲೇ, ಇಲ್ಲಿನ ಭೇಟಿ ಅರ್ಥಪೂರ್ಣವಾಗಿರುತ್ತದೆ. ಹಾಗಾದ್ರೆ ಈ ದೇವಸ್ಥಾನದ ವಿಶೇಷತೆಗಳೇನು ಅಂತಾ ತಿಳಿಯೋಣ ಬನ್ನಿ..
ಚಿಕ್ಕಮಗಳೂರಿನ ಹೊರನಾಡಿನಲ್ಲಿ ಪಾರ್ವತಿ ದೇವಿಯ ರೂಪವಾದ ಅನ್ನಪೂರ್ಣೆ ಇಲ್ಲಿ ನೆಲೆನಿಂತಿದ್ದಾಳೆ. ಅಡಿಯಿಂದ ಮುಡಿಯವರೆಗೂ ಈಕೆಯನ್ನು ಚಿನ್ನಾಭರಣಗಳಿಂದ, ಸುಂದರ ರೇಷ್ಮೆ ಸೀರೆಯಿಂದ ಅಲಂಕರಿಸಿರುವುದನ್ನು ನೋಡುವುದೇ ಒಂದು ಆನಂದ. ಇನ್ನು ಈ ದೇವಸ್ಥಾನದಲ್ಲಿ ಅನ್ನದಾನ ಸೇವೆಯಿಂದು, ಬಂದ ಭಕ್ತರು, ಅನ್ನಪ್ರಸಾದ ಸ್ವೀಕರಿಸಿ ಹೋಗುತ್ತಾರೆ.
ಪುಟ್ಟ ಮಕ್ಕಳಿಗೆ ಅನ್ನಪ್ರಾಶನ ಮಾಡಿಸಲು ಇದು ಸೂಕ್ತವಾದ ಸ್ಥಳವಾಗಿದೆ. ಅಥವಾ ಅನ್ನ ಪ್ರಾಶನ ಮಾಡಿಸಿದ ಬಳಿಕ, ತಾಯಿಯ ಸನ್ನಿಧಿಗೆ ಬಂದು, ಮಕ್ಕಳು ಇಲ್ಲಿ ಅನ್ನಪ್ರಸಾದ ಸ್ವೀಕರಿಸಿದರೆ, ಅವರಿಗೆಂದೂ ಅನ್ನದ ಕೊರತೆ ಬರುವುದಿಲ್ಲವೆಂಬ ನಂಬಿಕೆ ಇದೆ.
ಇನ್ನು ದೇವಸ್ಥಾನದ ಹಿನ್ನೆಲೆ ತಿಳಿಯುತ್ತಿದ್ದರೆ, ಒಮ್ಮೆ ಶಿವ ಮತ್ತು ಪಾರ್ವತಿ ಪಗಡೆಯಾಡುತ್ತಿರುವಾಗ, ಶಿವ ಮತ್ತು ಪಾರ್ವತಿ ಮಧ್ಯೆ ಮಾತಿನ ಚಕಮಕಿಯುಂಟಾಗುತ್ತದೆ. ಶಿವ, ಈ ಭೂಮಿಯ ಮೇಲೆ ಇರುವುದೆಲ್ಲವೂ ಮಾಯ. ಆಹಾರವೂ ಮಾಯವೆಂದು ಹೇಳುತ್ತಾನೆ. ಈ ಮಾತಿನಿಂದ ಪಾರ್ವತಿಗೆ ಸಿಟ್ಟು ಬರುತ್ತದೆ.
ಆಗ ಭೂಮಿಯಿಂದ ಎಲ್ಲ ಬಗೆಯ ಆಹಾರವನ್ನು ಮಾಯ ಮಾಡುತ್ತಾಳೆ. ಆಗ ಜನರು ಸೇರಿದಂತೆ ಶಿವನು ಕೂಡ ಹಸಿವಿನಿಂದ ಕಂಗಾಲಾಗುತ್ತಾನೆ. ಆಗ ಶಿವನಿಗೆ ಆಹಾರದ ಬೆಲೆ ಏನೆಂದು ಅರ್ಥವಾಗುತ್ತದೆ. ಆಗ ಪಾರ್ವತಿಗಹೆ ಕರುಣೆ ಬಂದು, ಆಕೆ ಕಾಶಿಯಲ್ಲಿ ಅನ್ನಪೂರ್ಣೇಶ್ವರಿಯ ರೂಪದಲ್ಲಿ ಶಿವನಿಗೆ ಅನ್ನ ನೀಡುತ್ತಾಳೆ.
ಜನರಿಗೂ ಆಹಾರ ಸಿಗುವಂತೆ ಮಾಡುತ್ತಾಳೆ. ಜನರ ಹಸಿವನ್ನು ನೀಗಿಸಿ, ಪೂರ್ಣ ಪ್ರಮಾಣದ ಅನ್ನ ಕೊಟ್ಟ ಕಾರಣಕ್ಕೆ, ಪಾರ್ವತಿ ದೇವಿಗೆ ಅನ್ನಪೂರ್ಣೇಶ್ವರಿ ಎಂಬ ಹೆಸರು ಬಂದಿತು. ಕಾಲಾಂತರದಲ್ಲಿ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನಲ್ಲಿ ಅಗಸ್ತ್ಯ ಮುನಿಗಳು, ಅನ್ನಪೂರ್ಣೇಶ್ವರಿಯನ್ನು ಹೊರನಾಡಿನಲ್ಲಿ ಪ್ರತಿಷ್ಠಾಪಿಸುತ್ತಾರೆ. ಬಳಿಕ ಮತ್ತೆ ಪುನರ್‌ಪ್ರತಿಷ್ಠಾಪನೆ ಮಾಡಲಾಗಿದ್ದು, ಅನ್ನಪೂರ್ಣೇಶ್ವರಿಗೆ ಪ್ರತೀ ದಿನ ವಿಶೇಷ ಪೂಜೆ ನಡೆಯುತ್ತದೆ.