ಈ ಮೊದಲ ಭಾಗದಲ್ಲಿ ನಾವು ದೂರ್ವಾಸರು ಶ್ರೀರಾಮನಿಗೆ ಎಂಥ ಕೆಲಸ ಮಾಡಲು ಹೇಳಿದ್ದರು ಅನ್ನೋ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಶ್ರೀರಾಮ, ದೂರ್ವಾಸರು ಹೇಳಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾನಾ..? ಇಲ್ಲವಾ ಅನ್ನೋ ಬಗ್ಗೆ ಹೇಳಲಿದ್ದೇವೆ..
ಶ್ರೀರಾಮ, ಸೀತೆ ಮತ್ತು ಲಕ್ಷ್ಮಣ ಸೇರಿ ಈ ಬಗ್ಗೆ ಮಾತನಾಡಿಕೊಂಡರು. ಶ್ರೀರಾಮ ಒಂದು ಪತ್ರ ಬರೆದು ತನ್ನ ಬಾಣದಿಂದ ಇಂದ್ರಲೋಕಕ್ಕೆ ಪತ್ರವನ್ನು ಕಳುಹಿಸಿದ. ಪತ್ರ ಇಂದ್ರನ ಕೈ ಸೇರಿತು. ಅದರಲ್ಲಿ ಹೀಗೆ ಬರೆದಿತ್ತು. ನಮ್ಮ ಮನೆಗೆ ದೂರ್ವಾಸ ಮುನಿಗಳು ಬಂದಿದ್ದಾರೆ. ಅವರಿಗೆ ವಿಶಿಷ್ಠ ಭೋಜನ ಮತ್ತು ಮನುಷ್ಯರು ಕಾಣದ ಹೂವು ಬೇಕು. ಹಾಗಾಗಿ ನೀವು ಮತ್ತು ದೇವತೆಗಳು ಸೇರಿ, ಕಲ್ಪವೃಕ್ಷ ಮತ್ತು ಪಾರಿಜಾತ ಪುಷ್ಪವನ್ನು ತೆಗೆದುಕೊಂಡು ಅಯೋಧ್ಯೆಗೆ ಬನ್ನಿ ಎಂದು ಹೇಳುತ್ತಾನೆ.
ಶ್ರೀರಾಮನ ಮಾತಿನಂತೆ ಇಂದ್ರ, ದೇವತೆಗಳ ಜೊತೆ ಪಾರಿಜಾತ ಪುಷ್ಪ ಮತ್ತು, ಕಲ್ಪವೃಕ್ಷವನ್ನು ತೆಗೆದುಕೊಂಡು ಅಯೋಧ್ಯೆಗೆ ಬರುತ್ತಾರೆ. ಸರಯೂ ನದಿಯಲ್ಲಿ ಮಿಂದ ದೂರ್ವಾಸರು ಶಿಷ್ಯರೊಂದಿಗೆ ಅರಮನೆಗೆ ಬರುತ್ತಾರೆ. ಆಗ ಶ್ರೀರಾಮ ಮತ್ತು ಸೀತೆ ಸೇರಿ, ದೂರ್ವಾಸರ ಪಾದ ಪೂಜೆ ಮಾಡುತ್ತಾರೆ., ಶಿವನ ಪೂಜೆಗಾಗಿ ಪಾರಿಜಾತ ಪುಷ್ಪ ನೀಡುತ್ತಾರೆ. ಸೀತೆ ಪಾತ್ರೆಗಳನ್ನ ತೆಗೆದುಕೊಂಡು ಕಲ್ಪವೃಕ್ಷದ ಬಳಿ ಹೋಗುತ್ತಾಳೆ.
ಅಲ್ಲಿ ವಿಶಿಷ್ಠ ಭೋಜನಕ್ಕಾಗಿ ಕೇಳಿಕೊಳ್ಳುತ್ತಾಳೆ. ದೂರ್ವಾಸರ ಆಜ್ಞೆಯಂತೆ, ಅಗ್ನಿ, ಜಲ ಮತ್ತು ಹಸುವಿನ ಸಹಾಯವಿಲ್ಲದ ಅಡುಗೆ ಸಿಗುತ್ತದೆ. ಅದನ್ನ ದೂರ್ವಾಸರಿಗೆ ಅರ್ಪಿಸುತ್ತಾರೆ. ಶ್ರೀರಾಮನ ಈ ಕೆಲಸವನ್ನು ಕಂಡು ದೂರ್ವಾಸರಿಗೆ ಸಂತೋಷವಾಗುತ್ತದೆ. ಅವರು ಎಲ್ಲರನ್ನೂ ಹರಸಿ, ಭೋಜನ ಉಂಡು ತೆರಳುತ್ತಾರೆ.