ಈಗಿನ ಕಾಲದಲ್ಲಿ ಸ್ಟ್ರೀಟ್ ಫುಡ್ ಇಷ್ಟಪಡದ ಜನ ಇಲ್ಲವೇ ಇಲ್ಲ. ಪಾನೀಪುರಿ, ಮಸಾಲೆ ಪುಡಿ, ಸಮೋಸಾ, ಸ್ಯಾಂಡ್‌ವಿಚ್, ಗೋಬಿ ಹೀಗೆ ಸುಮಾರು ರೀತಿಯ ಸ್ಟ್ರೀಟ್ ಫುಡ್‌ಗಳು ಇಂದಿನ ಯುವಜನತೆಯ ಫೇವರಿಟ್ ತಿಂಡಿಗಳಾಗಿದೆ. ಇದರೊಂದಿಗೆ ಕಚೋರಿ ಪ್ರಿಯರ ಸಂಖ್ಯೆಯೇನು ಕಮ್ಮಿ ಇಲ್ಲ. ಆದ್ರೆ ನೀವಿಗ ಸ್ಟ್ರೀಟ್ ಸ್ಟೈಲ್ ಕಚೋರಿಯನ್ನ ಮನೆಯಲ್ಲೇ ತಯಾರಿಸಬಹುದು. ಅದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ನಾಲ್ಕು ತಾಸು ನೆನೆಸಿದ ಹೆಸರು ಬೇಳೆ ಒಂದು ಕಪ್, ಎರಡು ಕಪ್ ಮೈದಾ, 2 ಸ್ಪೂನ್ ಕುಟ್ಟಿ ತರಿತರಿಯಾಗಿ ಪುಡಿ ಮಾಡಿದ ಜೀರಿಗೆ, ಧನಿಯಾ ಮತ್ತು ಸೋಂಪು, ಒಂದು ಸ್ಪೂನ್ ಗರಂ ಮಸಾಲೆ ಪುಡಿ, ಒಂದು ಸ್ಪೂನ್ ಖಾರದ ಪುಡಿ, ಚಿಟಿಕೆ ಅರಿಶಿನ, ಒಂದು ಸ್ಪೂನ್ ಧನಿಯಾ ಪುಡಿ, ಒಂದು ಸ್ಪೂನ್ ಚಾಟ್ ಮಸಾಲೆ ಪುಡಿ, ಒಂದು ಸ್ಪೂನ್ ಹುರಿದು ಪುಡಿ ಮಾಡಿದ ಜೀರಿಗೆ ಪುಡಿ, ಎರಡು ಸ್ಪೂನ್ ಕಡಲೆ ಹಿಟ್ಟು, ಚಿಟಿಕೆ ಇಂಗು, ಎರಡು ಸ್ಪೂನ್ ತುಪ್ಪ, ಎರಡು ಸ್ಪೂನ್ ಎಣ್ಣೆ, ಚಿಟಕೆ ವೋಮ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ಮೊದಲು ಮೈದಾ ಹಿಟ್ಟು, ಉಪ್ಪು, ವೋಮ, ಬಿಸಿ ಮಾಡಿದ ತುಪ್ಪ ಹಾಕಿ ಹಿಟ್ಟು ಕಲೆಸಿ. ಈಗ ಅದಕ್ಕೆ ತಣ್ಣೀರು ಹಾಕಿ, ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ. ಈಗ ಸಾಫ್ಟ್ ಸಾಫ್ಟ್ ಆದ ಕಚೋರಿ ಹಿಟ್ಟು ರೆಡಿ. ಇದಕ್ಕೆ ಕಾಟನ್ ಕ್ಲಾತ್ ಮುಚ್ಚಿ, 20 ನಿಮಿಷ ಬದಿಗಿರಿಸಿ. ಈಗ ನೆನೆಸಿದ ಹೆಸರು ಬೇಳೆಯನ್ನು ಮಿಕ್ಸಿ ಜಾರ್‌ಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಈ ಮಿಶ್ರಣ ಹೆಚ್ಚು ತೆಳುವಾಗದೇ, ಗಟ್ಟಿಯಾಗೇ ಇರಲಿ.
ಹೀಗೆ ಹಿಟ್ಟನ್ನು ಬದಿಗಿರಿಸಿದ ಬಳಿಕ, ಕಚೋರಿ ಮಸಾಲಾ ರೆಡಿ ಮಾಡಿಕೊಳ್ಳಿ. ಒಂದು ಪ್ಯಾನ್‌ಗೆ ಎರಡು ಸ್ಪೂನ್ ಎಣ್ಣೆ ಹಾಕಿ, ಅದು ಕೊಂಚ ಕಾದ ಬಳಿಕ, 2 ಸ್ಪೂನ್ ಕುಟ್ಟಿ ತರಿತರಿಯಾಗಿ ಪುಡಿ ಮಾಡಿದ ಜೀರಿಗೆ, ಧನಿಯಾ ಮತ್ತು ಸೋಂಪು ಹಾಕಿ ಒಮ್ಮೆ ಹುರಿಯಿರಿ. ನಂತರ ಅರಿಶಿನ, ಖಾರದ ಪುಡಿ, ಗರಂ ಮಸಾಲೆ, ಚಾಟ್ ಮಸಾಲೆ, ಧನಿಯಾ ಪುಡಿ, ಜೀರಿಗೆ ಪುಡಿ, ಇಂಗು, ಹಾಕಿ ಕೊಂಚ ಹುರಿಯಿರಿ. ನಂತರ ಕಡಲೆ ಹಿಟ್ಟು ಹಾಕಿ ಚೆನ್ನಾಗಿ ಹುರಿಯಿರಿ. ಈಗ ಉಪ್ಪು ಹಾಕಿ ಮಿಕ್ಸ್ ಮಾಡಿ. ಇದಕ್ಕೆ ರುಬ್ಬಿಕೊಂಡ ಹೆಸರು ಬೇಳೆಯನ್ನು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಕೊಂಚ ಹೊತ್ತು ಬಾಡಿಸಿ. ಈಗ ಮಸಾಲೆ ಮಿಶ್ರಣ ರೆಡಿ.
ರೆಡಿ ಇರುವ ಕಚೋರಿಹಿಟ್ಟನ್ನು ಪುರಿ ರೀತಿ ಲಟ್ಟಿಸಿ, ಅದಕ್ಕೆ ಮಸಾಲೆ ಹೂರಣ ತುಂಬಿಸಿ, ಕಚೋರಿ ರೀತಿ ಶೇಪ್ ಕೊಡಿ. ಹೀಗೆ ಎಲ್ಲ ಕಚೋರಿ ರೆಡಿ ಮಾಡಿಟ್ಟುಕೊಳ್ಳಿ. ನೀವು ಇಲ್ಲಿಯವರೆಗೆ ಎಷ್ಟೇ ಚೆನ್ನಾಗಿ ಹೂರಣ ಮತ್ತು ಹಿಟ್ಟನ್ನು ರೆಡಿ ಮಾಡಿದ್ದರೂ ಕೂಡ, ಕಚೋರಿ ಕರಿಯುವಾಗ ತಪ್ಪು ಮಾಡಿದ್ದಲ್ಲಿ, ಕಚೋರಿಯ ಟೇಸ್ಟ್ ಮತ್ತು ಶೇಪ್ ಔಟ್ ಆಗಿ ಹೋಗುತ್ತದೆ. ಹಾಗಾಗಿ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ, ಹೈ ಫ್ಲೇಮ್‌ನಲ್‌ಲಿ ಚೆನ್ನಾಗಿ ಕಾಯಿಸಿ, ಈಗ 4ರಿಂದ 5 ಕಚೋರಿ ಹಾಕಿ ಫ್ಲೇಮ್ ಕಡಿಮೆ ಮಾಡಿ. ಮಂದ ಉರಿಯಲ್ಲಿ ಕಚೋರಿ ಬೆಂದರೆ, ಉಬ್ಬುತ್ತದೆ. ಇಲ್ಲವಾದಲ್ಲಿ ಚಪ್ಪಟೆಯಾಗಿ, ಟೇಸ್ಟ್ ಹಾಳಾಗುತ್ತದೆ. ಕಚೋರಿ ತಿಳಿ ಕಂದು ಬಣ್ಣ ಬರುವವರೆಗೂ ಕಾಯಿಸಿದರೆ, ಕಚೋರಿ ರೆಡಿ.