Varanasi: ಕಾಶಿ ವಿಶ್ವನಾಥ ಧಾಮ (Kashi Vishwanath Dham) ಕಾರಿಡಾರ್ನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಯವರು ಇತ್ತೀಚೆಗಷ್ಟೇ ಉದ್ಘಾಟನೆ ಮಾಡಿದ್ದಾರೆ. ಅದ್ದೂರಿಯಾಗಿ ಲೋಕಾರ್ಪಣೆಗೊಂಡ ಕಾಶಿ ವಿಶ್ವನಾಥ ಧಾಮ ದೇಗುಲಕ್ಕೆ ಹೊಸವರ್ಷದ ಮೊದಲ ದಿನ 5 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡಿ, ದೇವರ ದರ್ಶನ ಪಡೆದಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದು ದಾಖಲೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.
ಈ ಶಿವನ ದೇವಸ್ಥಾನಕ್ಕೆ ಸಾಮಾನ್ಯವಾಗಿ ಶಿವರಾತ್ರಿಯಂದು 2.5 ಲಕ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆದರೆ ಹೊಸ ವರ್ಷದ ಮೊದಲ ದಿನ 5 ಲಕ್ಷ ಜನರು ಭೇಟಿ ಕೊಟ್ಟಿದ್ದು ಅಚ್ಚರಿಯಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ.
ಸಾಮಾನ್ಯವಾಗಿ ಹೊಸ ವರ್ಷದ ಮೊದಲ ದಿನ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಹಾಗೇ, ಕಾಶಿ ವಿಶ್ವನಾಥ ದೇವಸ್ಥಾನಕ್ಕೂ ಸುಮಾರು 1 ಲಕ್ಷ ಭಕ್ತರು ಆಗಮಿಸಿಬಹುದು ಎಂದು ದೇಗುಲ ಮಂಡಳಿ ಅಂದಾಜಿಸಿತ್ತು. ಅದಕ್ಕೆ ತಕ್ಕಂತೆ ಸಿದ್ಧತೆ, ಭದ್ರತೆಗಳನ್ನೂ ಮಾಡಿಕೊಂಡಿತ್ತು. ಆದರೆ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಜನರು ಆಗಮಿಸಿದರು ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿಗೆ ಹೋಗಿ ಕಾಶಿ ವಿಶ್ವನಾಥ ಧಾಮ ಕಾರಿಡಾರ್ ಉದ್ಘಾಟನೆ ಮಾಡಿದ ಬೆನ್ನಲ್ಲೇ, ನವೀಕೃತ ಕಾಶಿಯ ಫೋಟೋಗಳು, ವಿಡಿಯೋಗಳು ಪ್ರಮುಖ ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಇತಿಹಾಸದಲ್ಲಿ ಇದ್ದಂಥ ಕಾಶಿ ಮತ್ತೆ ನಿರ್ಮಾಣವಾಗಿದೆ, ಕಾಶಿ ವೈಭವ ಮರುಕಳಿಸಿದೆ ಎಂದು ಹೇಳಲಾಗುತ್ತಿದ್ದು, ಅದನ್ನು ಕಣ್ತುಂಬಿಕೊಳ್ಳುವ ಸಲುವಾಗಿಯೇ ಭಕ್ತರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಅಲ್ಲಿಗೆ ತೆರಳುತ್ತಿದ್ದಾರೆ.