Biography: ಆತ ತನ್ನ ತಂದೆಯ ಕಷ್ಟವನ್ನು ನೋಡಲಾಗದೇ, ಓದು ಬಿಟ್ಟು ಬಜ್ಜಿ ಮಾಡಿ, ಮಾರಲು ಮುಂದಾದ ಬಾಲಕ. ಬಳಿಕ ಬೇರೆ ಬೇರೆ ಕೆಲಸಗಳನ್ನ ಮಾಡಿ, ಸೋತು ಹೋಗಿ, ಕೊನೆಗೆ ಇನ್ನೊಂದು ರಾಷ್ಟ್ರಕ್ಕೆ ಹೋಗಿ, ಅಲ್ಲಿನ ಕಂಪನಿಯಲ್ಲಿ ಕೆಲಸ ಮಾಡಿದ. ಆದರೆ ಆ ದೇಶದಿಂದ ಹೊರಬೀಳುವ ಪರಿಸ್ಥಿತಿ ಬಂದಾಗ ಮಾತ್ರ, ಬುದ್ಧಿವಂತಿಕೆ ಉಪಯೋಗಿಸಿ, ಭಾರತಕ್ಕೆ ಬಂದು ವ್ಯಾಪಾರ ಆರಂಭಿಸಿದ. ಕೋಟಿ ಕೋಟಿ ಸಂಪಾದನೆ ಮಾಡಿ, ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಎನ್ನಿಸಿಕೊಂಡ. ಹಾಗಾದ್ರೆ ಯಾರು ಆ ಶ್ರೀಮಂತ ಉದ್ಯಮಿ, ಅವರ ಜೀವನ ಹೇಗಿತ್ತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಧೀರುಭಾಯ್ ಅಂಬಾನಿ. ಪೂರ್ತಿ ಹೆಸರು ಧೀರಜ್‌ಚಂದ್ ಅಂಬಾನಿ. ಇವರೇ ನಾವೀಗ ಮಾತನಾಡುತ್ತಿರುವ ಶ್ರೀಮಂತ ಉದ್ಯಮಿ. ಗುಜರಾತಿನ ಸಣ್ಣ ಹಳ್ಳಿಯಲ್ಲಿ, ಸಾಮಾನ್ಯ ಪರಿವಾರದಂದು ಧೀರುಭಾಯ್ ಜನನವಾಯಿತು. ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿರದ ಕಾರಣ, ಧೀರುಭಾಯ್ ಶಿಕ್ಷಣವನ್ನು ಮೊಟಕುಗೊಳಿಸಿ, ಬಜ್ಜಿ ಮಾಡಿ ಮಾರಲು ನಿರ್ಧರಿಸಿದರು. ಆದರೆ ಹೆಚ್ಚು ದಿನ ಬಜ್ಜಿಯಿಂದ ಆದಾಯ ಬರಲಿಲ್ಲ.
ಇನ್ನು ಹಲವಾರು ಕೆಲಸ ಮಾಡಿದರೂ, ಬೇಕಾದಷ್ಟು ದುಡ್ಡು ಸಿಗಲಿಲ್ಲ. ಹಾಗಾಗಿ ತಂದೆ, ಇವರಿಗೆ ಕೆಲಸಕ್ಕೆ ಸೇರಲು ಸಲಹೆ ನೀಡಿದರು. ಹಾಗಾಗಿ ತನ್ನ ಅಣ್ಣ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಕೆಲಸ ಮಾಡಲು ನಿರ್ಧರಿಸಿ, ಧೀರುಭಾಯ್ ಯಮನ್ ದೇಶಕ್ಕೆ ಹೋಗಿ, ಅಲ್ಲಿ ಕೆಲಸಕ್ಕೆ ಸೇರಿದರು. ಶೆಲ್ ಪೆಟ್ರೋಲ್ ಪಂಪ್‌ನಲ್ಲಿ ಧೀರುಭಾಯ್‌ಗೆ ಕೆಲಸ ಸಿಕ್ಕಿತು. ಬಳಿಕ ಎರಡೇ ವರ್ಷದಲ್ಲಿ ಮ್ಯಾನೇಜರ್ ಆಗುವ ಅವಕಾಶ ಧೀರುಭಾಯ್ ಅವರದ್ದಾಯಿತು.
ಧೀರುಭಾಯ್ ಯೋಚನೆ ಆಕಾಶದತ್ತೆರಕ್ಕಿತ್ತು. ಹಾಗಾಗಿ ಅವರು ದೊಡ್ಡ ದೊಡ್ಡ ಯೋಚನೆಗಳನ್ನೇ ಮಾಡುತ್ತಿದ್ದರು. ಹೆಚ್ಚು ಹಣ ಸಂಪಾದನೆ ಹೇಗೆ ಮಾಡುವುದು ಅನ್ನೋ ಬಗ್ಗೆಯೇ ಯೋಚಿಸುತ್ತಿದ್ದರು. ಇವರು ಕೆಲಸ ಮಾಡುವಲ್ಲಿ ಕಡಿಮೆ ದುಡ್ಡಿಗೆ ಚಹಾ, ಕಾಫಿ, ತಿಂಡಿ ಸಿಗುತ್ತಿತ್ತು. ಆದರೆ ಧೀರು ಮಾತ್ರ, ಪಕ್ಕದ ಹೊಟೇಲ್‌ಗೆ ಹೋಗಿ, ಟೀ ಕುಡಿಯುತ್ತಿದ್ದರು. ಆಗ ಅವರ ಸಹೋದ್ಯೋಗಿಗಳು, ಯಾಕೆ ನೀನು ಅಲ್ಲಿ ಹೋಗಿ ಟೀ ಕುಡಿಯುತ್ತಿ..? ಇಲ್ಲಿ ಅಲ್ಲಿ ಸಿಗುವುದಕ್ಕಿಂತ ಕಡಿಮೆ ಬೆಲೆಗೆ ರುಚಿಯಾದ ಚಹಾ ಸಿಗುತ್ತದೆ. ಆದರೂ ನೀನ್ಯಾಕೆ ಅಲ್ಲಿ ಹೋಗುತ್ತಿ ಎಂದು ಪ್ರಶ್ನಿಸುತ್ತಾರೆ.
ಅದಕ್ಕೆ ಉತ್ತರಿಸಿದ ಅಂಬಾನಿ, ನಾನು ಅಲ್ಲಿಗೆ ಹೋಗುವುದು ಬರೀ ಟೀ ಕುಡಿಯುವುದಕ್ಕಷ್ಟೇ ಅಲ್ಲ. ಅಲ್ಲಿ ದೊಡ್ಡ ದೊಡ್ಡ ಉದ್ಯಮಿಗಳು ಹಲವು ವಿಷಯಗಳ ಬಗ್ಗೆ ಚರ್ಚಿಸಲು ಬರುತ್ತಾರೆ. ಅವರು ಉದ್ಯಮ ಶುರು ಮಾಡುವ ಬಗ್ಗೆ, ಬಂಡವಾಳ ಹೇಗೆ ಕೂಡಿಸಬೇಕು ಎಂಬ ಬಗ್ಗೆ ಚರ್ಚಿಸುತ್ತಾರೆ. ನಾನು ಅದನ್ನು ಕೇಳುತ್ತೇನೆ. ಮತ್ತು ನಾನು ಯಾವ ರೀತಿಯ ಉದ್ಯಮ ಮಾಡಬಹುದು. ಹೇಗೆ ಬಂಡವಾಳ ಹಾಕಬಹುದು ಎಂದು ಚರ್ಚಿಸುತ್ತೇನೆ ಎಂದು ಹೇಳುತ್ತಾರೆ.
ಹಾಗಾದ್ರೆ ಅಂಬಾನಿ, ಯಮನ್‌ನಲ್ಲಿದ್ದಕೆಲಸ ಬಿಟ್ಟು ಭಾರತಕ್ಕೆ ಬರುವಂಥದ್ದು ಏನಾಯಿತು..? ಭಾರತಕ್ಕೆ ಬಂದ ಬಳಿಕ, ಅಂಬಾನಿ ಏನು ಮಾಡಿದರು..? ಅವರು ಶ್ರೀಮಂತರಾಗಲು ಕಾರಣವಾದರೂ ಏನು ಅಂತಾ ಮುಂದಿನ ಭಾಗದಲ್ಲಿ ತಿಳಿಯೋಣ..