Spiritual: ದಕ್ಷಿಣ ಭಾರತದ ಪ್ರಸಿದ್ಧ ದೇವಸ್ಥಾನಗಳಲ್ಲಿ ಕೇರಳದ ಗುರುವಾಯೂರಪ್ಪ ದೇವಸ್ಥಾನ ಕೂಡ ಒಂದು. ಇಲ್ಲಿ ಶ್ರೀಕೃಷ್ಣನನ್ನು ಪೂಜಿಸಲಾಗುತ್ತದೆ. ಈ ಬಾಲಕೃಷ್ಣನ ದರ್ಶನಕ್ಕಾಗಿ ದೇಶ ವಿದೇಶಗಳಿಂದ ಜನ ಬರುತ್ತಾರೆ. ಹಾಗಾದರೆ ಶ್ರೀಕೃಷ್ಣನಿಗೆ ಗುರುವಾಯೂರಪ್ಪ ಎಂದು ಹೆಸರು ಬರಲು ಕಾರಣವೇನು..? ಈ ದೇವಸ್ಥಾನದ ಹಿನ್ನೆಲೆ ಏನು..? ಎಂಬ ಬಗ್ಗೆ ತಿಳಿಯೋಣ ಬನ್ನಿ..
ಉತ್ತರಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ, ಶ್ರೀಕೃಷ್ಣನ ನಗರಿ ದ್ವಾರಕೆಯಲ್ಲಿ ಗುರುವಾಯೂರಪ್ಪನ ಮೂರ್ತಿ ಇತ್ತು. ಸಮುದ್ರದ ಆಳದಲ್ಲಿ ಈ ಮೂರ್ತಿ ಇದ್ದು, ಇದನ್ನು ಹೊರ ತೆಗೆದ ಗುರು ಬೃಹಸ್ಪತಿ ಮತ್ತು ವಾಯುದೇವ, ಇದನ್ನು ಪುನಃ ಪ್ರತಿಷ್ಠಾಪಿಸಲು ಉತ್ತಮ ಜಾಗವನ್ನು ಹುಡುಕುತ್ತಿದ್ದರು. ಕೇರಳದ ತ್ರಿಶೂರನಲ್ಲಿರುವ ಈ ಜಾಗವೇ, ಪ್ರತಿಷ್ಠಾಪನೆಗೆ ಉತ್ತಮ ಸ್ಥಳವೆಂದು ಅವರಿಗೆ ಅನ್ನಿಸಿತು. ಹಾಗಾಗಿ ಅವರು ಆ ಶ್ರೀಕೃಷ್ಣನ ಮೂರ್ತಿಯನ್ನು ಅಲ್ಲೇ ಪ್ರತಿಷ್ಠಾಪಿಸಿದರು.
ಗುರು ಮತ್ತು ವಾಯು ಸೇರಿ ಈ ಮೂರ್ತಿಯನ್ನು ಹುಡುಕಿ ತಂದು ಪ್ರತಿಷ್ಠಾಪಿಸಿದ ಕಾರಣ ಇಲ್ಲಿನ ಶ್ರೀಕೃಷ್ಣನನ್ನು ಗುರುವಾಯೂರಪ್ಪ ಎಂದು ಕರೆಯಲಾಗುತ್ತದೆ. ಗುರುವಾಯೂಪ್ಪನ ದರ್ಶನ ಪಡೆಯಲು ಹಲವು ನಿಯಮಗಳಿದೆ. ಇಲ್ಲಿ ಹೋಗುವಾಗ ಪುರುಷರು ಶರ್ಟ್ ತೆಗೆದು ಹೋಗಬೇಕು. ಪಂಚೆ ಧರಿಸಿರಬೇಕು. ಮಹಿಳೆಯರು ಸೀರೆ, ಚೂಡಿದಾರದಂಥ ಉಡುಪು ಧರಿಸಬೇಕು. ಜೀನ್ಸ್, ಸ್ಕರ್ಟ್‌ನಂಥ ಡ್ರೆಸ್‌ಗಳನ್ನ ಧರಿಸಿದವರಿಗೆ ಇಲ್ಲಿ ಪ್ರವೇಶ ಸಿಗುವುದಿಲ್ಲ.
ಇನ್ನು ಈ ದೇವಸ್ಥಾನದಲ್ಲೊಂದು ಕಲ್ಯಾಣಿ ಇದೆ. ಇದನ್ನು ರುದ್ರತೀರ್ಥವೆಂದು ಕರೆಯುತ್ತಾರೆ. ಇದರಲ್ಲಿ ಮಿಂದರೆ, ಹಲವು ರೋಗಗಳಿಂದ ಮುಕ್ತಿ ಸಿಗುತ್ತದೆ ಅನ್ನೋ ನಂಬಿಕೆ ಇದೆ. ಅಲ್ಲದೇ, ಈ ದೇವಸ್ಥಾನದಲ್ಲೊಂದು ಕೋಣೆ ಇದ್ದು, ಆ ಕೋಣೆಗೆ ಯಾರೂ ಹೋಗುವಂತಿಲ್ಲ. ಏಕೆಂದರೆ ಅಲ್ಲಿ, ಚಿನ್ನಾಭರಣ, ವಜ್ರ, ವೈಢೂರ್ಯವಿದ್ದು, ನಾಗದೇವ ಅದನ್ನು ಕಾಯುತ್ತಿದ್ದಾನೆ ಅನ್ನೋ ನಂಬಿಕೆ ಇದೆ. ಹಾಗಾಗಿ ಇಲ್ಲಿ ಹೋಗಲು ಯಾರೂ ಧೈರ್ಯ ಮಾಡುವುದಿಲ್ಲ.