Spiritual: ರಾಮಾಯಣದಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಸೀತೆ ಕೂಡ ಒಬ್ಬಳು. ಆಕೆ ಯಾವಾಗಲೂ ಶಾಂತ ಸ್ವರೂಪಳು ಎಂಬುದನ್ನಷ್ಟೇ ನಾವು ನೋಡಿದ್ದೇವೆ. ಆದರೆ ಸೀತಾದೇವಿ ರಾಕ್ಷಸನ ಸಂಹಾರಕ್ಕಾಗಿ ರಣಚಂಡಿ ರೂಪವನ್ನೂ ತಾಳಿದ್ದಳು. ಹಾಗಾದರೆ, ಯಾವ ರಾಕ್ಷಸನನ್ನು ಕೊಲ್ಲಲು ಸೀತಾಮಾತೆ, ರಣಚಂಡಿ ರೂಪ ತಾಳಿದ್ದಳು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ರಾವಣನ ಸಂಹಾರದ ಬಳಿಕ, ರಾಮ ವಿಭೀಷಣನಿಗೆ ಲಂಕೆಯ ಅಧಿಕಾರ ಕೊಟ್ಟು, ತಾನು ಅಯೋಧ್ಯೆಗೆ ಬಂದು ಸಿಂಹಾಸನವೇರಿದ್ದ. ಆದರೆ ಒಂದು ದಿನ ವಿಭೀಷಣ, ಪತ್ನಿ ಮತ್ತು ಸೇನೆಯೊಂದಿಗೆ ಅಯೋಧ್ಯೆಗೆ ಬಂದ.ಗಾಬರಿಯಾಗಿದ್ದ ವಿಭೀಷಣನನ್ನು ಕಂಡ ರಾಮ, ಕಾರಣವೇನೆಂದು ಕೇಳಿದಾಗ, ನನ್ನ ಮತ್ತು ನಿಮ್ಮ ಮೇಲೆ ದಾಳಿ ಮಾಡಲು ಮೂಲಕಾಸುರ ತಯಾರಿ ನಡೆಸಿದ್ದಾನೆಂದು ಹೇಳಿದ.
ಯಾರು ಈ ಮೂಲಕಾಸುರನೆಂದು ಕೇಳಿದಾಗ, ಉತ್ತರಿಸಿದ ವಿಭೀಷಣ, ಮೂಲಕಾಸುರನೆಂದರೆ, ಕುಂಭಕರಣನ ಮಗ. ಅವನು ಮೂಲಾ ನಕ್ಷತ್ರದಲ್ಲಿ ಹುಟ್ಟಿದ ಕಾರಣ, ಕುಂಭಕರಣ ಅವನನ್ನು ಗುಹೆಯೊಂದರಲ್ಲಿ ಬಿಟ್ಟು ಬಂದ. ಅಲ್ಲಿ ದುಂಬಿಗಳು ಅವನನ್ನು ಸಾಕಿ ಸಲುಹಿದವು. ಅವನು ಪ್ರೌಢಾವಸ್ಥೆಗೆ ಬಂದಾಗ, ಅವನಿಗೆ ತನ್ನ ಅಪ್ಪ ಕುಂಭರಕರಣನನ್ನು ಕೊಂದವರು ನೀವೆಂದು ಗೊತ್ತಾಯಿತು. ಮತ್ತು ನಾನು ಈಗ ಲಂಕೆಯ ರಾಜ್ಯಭಾರ ಮಾಡುತ್ತಿದ್ದೆನೆಂದು ಗೊತ್ತಾಗಿದೆ. ಹಾಗಾಗಿ ನನ್ನನ್ನು ಮತ್ತು ನಿಮ್ಮನ್ನು ಸಂಹರಿಸಲು ಮೂಲಕಾಸುರ ತಯಾರಿ ನಡೆಸಿದ್ದಾನೆ ಎಂದನು.
ರಾಮ ತನ್ನ ಸೇನೆಯೊಂದಿಗೆ ಸೇರಿ ವಿಭೀಷಣನ ಜೊತೆ, ಲಂಕೆಗೆ ಹೋಗುತ್ತಾನೆ. ಅಲ್ಲಿ, ರಾಮ ಮತ್ತು ಮೂಲಕಾಸುರನ ಮಧ್ಯೆ ಹಲವು ದಿನಗಳ ಕಾಲ ಯುದ್ಧವಾಗುತ್ತದೆ. ಆದರೆ ಏನೂ ಪ್ರಯೋಜನವಾಗುವುದಿಲ್ಲ. ಆಗ ಪ್ರತ್ಯಕ್ಷನಾದ ಬ್ರಹ್ಮದೇವ, ರಾಮನಿಗೆ ಈ ರೀತಿ ಹೇಳುತ್ತಾರೆ. ಮೂಲಕಾಸುರ ಪುರುಷರಿಂದ ಸಾವನ್ನಪ್ಪದ ಹಾಗೆ ವರ ಪಡೆದಿದ್ದಾನೆ. ಹಾಗಾಗಿ ಅವನನ್ನು ಸ್ತ್ರೀ ಯೇ ವಧಿಸಬೇಕು ಎನ್ನುತ್ತಾರೆ.
ಅಲ್ಲದೇ, ಇವನು ಕೆಲ ಋಷಿಮುನಿಗಳ ಎದುರು ಸೀತೆಯನ್ನು ತಂದೆ ಸಾವಿನ ಆರೋಪಿ, ಚಂಡಿ ಎಂದು ಬೈದಿದ್ದ. ಹಾಗಾಗಿ ಆ ಋಷಿಗಳು, ಇವನಿಗೆ ನೀನು ಅದೇ ಸೀತಾಮಾತೆಯಿಂದಲೇ ಸಂಹಾರವಾಗು ಎಂದು ಶಾಪ ನೀಡಿದ್ದರು. ಹಾಗಾಗಿ ಈತನ ಸಂಹಾರಕ್ಕಾಗಿ ಸೀತೆಯೇ ಚಂಡಿ ರೂಪವನ್ನು ತಾಳಬೇಕು ಎಂದರು. ತಕ್ಷಣ ಹನುಮ ಸೀತೆಯನ್ನು ರಾಮನ ಬಳಿ ಕರೆತರುತ್ತಾನೆ. ಸೀತಾದೇವಿ ರಾಮನ ಆಜ್ಞೆಯಂತೆ, ಚಂಡಿ ರೂಪ ತಾಳಿ ಮೂಲಕಾಸುರನನ್ನು ವಧಿಸುತ್ತಾಳೆ.