ಶಿವನಿಗಾಗಿ ಪಾರ್ವತಿ ಹಲವು ವರ್ಷಗಳ ಕಾಲ ತಪಸ್ಸನ್ನಾಚರಿಸಿದಳು. ಆಕೆ ತಪ್ಪಸ್ಸು ಆಚರಿಸುವಾಗ, ಸಾಕಷ್ಟು ಕಷ್ಟಗಳನ್ನ ಕೂಡ ಅನುಭವಿಸಿದಳು. ಇದಾದ ಬಳಿಕ ಶಿವ ಪಾರ್ವತಿಯ ತಪಸ್ಸಿಗೆ ಮೆಚ್ಚಿ, ಆಕೆಯ ಮನದರಸನಾದ. ಆದ್ರೆ ಈ ವೇಳೆ ಪಾರ್ವತಿಯನ್ನ ಪರೀಕ್ಷಿಸಲು ಶಿವ ಮೊಸಳೆಯ ರೂಪ ತಾಳಬೇಕಾಯಿತು. ಹಾಗಾದ್ರೆ ಶಿವನೇಕೆ ಮೊಸಳೆಯ ರೂಪ ತಾಳಿದ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಪಾರ್ವತಿಯ ಹಲವು ವರ್ಷಗಳ ಕಠಿಣ ತಪಸ್ಸನ್ನ ಮೆಚ್ಚಿದ ಶಿವ, ಪ್ರತ್ಯಕ್ಷನಾಗಿ ಆಕೆಯನ್ನು ತಾನು ವರಿಸುತ್ತೇನೆಂದು ಹೇಳಿದ. ಇದಾದ ಬಳಿಕ ಆಕೆ ತನ್ನ ಅರಮನೆಗೆ ಹೊರಟಳು. ಹೀಗೆ ಹೋಗುವಾಗ, ನದಿಯ ದಡದಲ್ಲಿ ಒಂದು ಮೊಸಳೆ ಒಂದು ಮಗುವನ್ನು ಕಚ್ಚಿ ಹಿಡಿದ ದೃಶ್ಯವನ್ನು ಪಾರ್ವತಿ ಕಂಡಳು. ಆ ಮಗು ತುಂಬಾ ಜೋರಾಗಿ ಅಳುತ್ತಿತ್ತು. ಮತ್ತು ತನ್ನ ಜೀವ ಉಳಿಸಲು ಯಾರಾದರೂ ಬನ್ನಿ ಎನ್ನುವಂತೆ ಕೂಗುತ್ತಿತ್ತು.
ಆ ಮಗುವಿನ ಅಳು ಕಂಡು ಪಾರ್ವತಿಯ ಮನಸ್ಸು ಕರಗಿತು. ಆಗ ಮೊಸಳೆಯನ್ನು ಕುರಿತು ಪಾರ್ವತಿ, ನಿನ್ನ ಕೈ ಮುಗಿಯುತ್ತೇನೆ, ದಯವಿಟ್ಟು ಆ ಮಗುವನ್ನು ಬಿಟ್ಟುಬಿಡು ಎಂದು ಬೇಡಿದಳು. ಅದಕ್ಕೆ ಮೊಸಳೆ, ನಾನು ನೀರಿನಲ್ಲಿ ವಾಸಿಸುತ್ತೇನೆ. ಮತ್ತು ದೇವರು ಇದನ್ನೇ ನನ್ನ ಆಹಾರವನ್ನಾಗಿ ಮಾಡಿದ್ದಾನೆ. ಈಗ ನಾನು ಈ ಮಗುವನ್ನು ತಿನ್ನದಿದ್ದಲ್ಲಿ, ಹಸಿವಿನಿಂದ ಸತ್ತು ಹೋಗುತ್ತೇನೆಂದು ಹೇಳುತ್ತದೆ.
ಆಗ ಪಾರ್ವತಿ, ನಾನು ನಿನಗೆ ನನ್ನ ಪ್ರಾಣವನ್ನು ನೀಡುತ್ತೇನೆ. ನೀನು ನನ್ನನ್ನು ನಿನ್ನ ಆಹಾರವನ್ನಾಗಿ ಸೇವಿಸು. ಆ ಮಗುವನ್ನು ಬಿಟ್ಟುಬಿಡು ಎಂದು ಹೇಳಿದಳು. ಅದಕ್ಕೆ ಮೊಸಳೆ, ನಾನು ಈ ಮಗುವನ್ನು ಬಿಡುತ್ತೇನೆ. ಆದರೆ, ನೀವು ನಿಮ್ಮ ಪ್ರಾಣದ ಬದಲು, ನಿಮ್ಮ ತಪಸ್ಸಿನ ಫಲವನ್ನು ನನಗೆ ಕೊಡಿ, ನಾನು ಈ ಮೊಸಳೆ ಜನ್ಮದಿಂದ ಮುಕ್ತಿ ಪಡೆಯುತ್ತೇನೆ ಎಂದು ಹೇಳಿತು. ಅದಕ್ಕೆ ಒಪ್ಪಿದ ಪಾರ್ವತಿ, ಸರಿ ಎಂದು ಹೇಳುತ್ತಾಳೆ.
ಅದಕ್ಕೆ ಮೊಸಳೆ, ನೀವು ಇಷ್ಟು ವರ್ಷ ಕಠಿಣ ತಪಸ್ಸು ಮಾಡಿ, ಭೋಲೆನಾಥನನ್ನು ಒಲಿಸಿಕೊಂಡಿದ್ದೀರಿ. ಈಗ ಈ ಮಗುವಿಗಾಗಿ ಆ ತಪಸ್ಸಿನ ಫಲವನ್ನು ನನಗೆ ಕೊಡುತ್ತೇನೆ ಎನ್ನುತ್ತಿದ್ದೀರಿ. ನೀವು ಪರಶಿವನನ್ನು ಬಿಟ್ಟು ಇರಬಲ್ಲಿರೇ..? ಎಂದು ಕೇಳುತ್ತದೆ. ಆಗ ಪಾರ್ವತಿ, ನನಗೆ ನನ್ನ ತಪಸ್ಸಿನ ಫಲಕ್ಕಿಂತ ಈ ಮಗುವಿನ ಪ್ರಾಣ ಉಳಿಸುವುದು ಮುಖ್ಯವಾಗಿದೆ. ಹಾಗಾಗಿ ನಾನು ನನ್ನ ತಪಸ್ಸಿನ ಫಲವನ್ನು ನಿನಗೆ ಧಾರೆ ಎರೆಯುತ್ತೇನೆ. ನಾನು ಪರಶಿವನನ್ನು ಬಿಟ್ಟು ಇರಲು ಸಾಧ್ಯವಿಲ್ಲ. ಹಾಗಾಗಿ ನಾನು ಮತ್ತೊಮ್ಮೆ ತಪಸ್ಸು ಮಾಡಿ, ಶಿವನನ್ನು ಒಲಿಸಿಕೊಳ್ಳುತ್ತೇನೆ ಎನ್ನುತ್ತಾಳೆ.
ಆಗ ಮೊಸಳೆ ರೂಪದಲ್ಲಿ ಶಿವ ತನ್ನ ನಿಜರೂಪಕ್ಕೆ ಬರುತ್ತಾನೆ. ಆ ಮೊಸಳೆ ಮತ್ತು ಆ ಮಗು ನಾನೇ ಆಗಿದ್ದೆ. ನಿನ್ನ ಈ ಸ್ವಭಾವದಿಂದ ನಾನು ಸಂತುಷ್ಟನಾಗಿದ್ದೇನೆ. ನಿನ್ನನ್ನು ಪರೀಕ್ಷಿಸಲು ಈ ವೇಷದಲ್ಲಿ ಬಂದಿದ್ದೆ. ನನ್ನ ಪತ್ನಿಯಾಗುವವಳಿಗೆ ಬೇರೆಯವರ ಪ್ರಾಣದ ಬಗ್ಗೆ ಎಷ್ಟು ಕಾಳಜಿ ಇದೆ. ಎಷ್ಟು ಕರುಣೆ ಇದೆ ಎನ್ನುವುದನ್ನು ನಾನು ನೋಡಬೇಕಿತ್ತು. ನೀನು ನಾನಿಟ್ಟ ಪರೀಕ್ಷೆಯಲ್ಲಿ ಗೆದ್ದಿದ್ದೀಯ. ಪರಿಪೂರ್ಣ ಮನಸ್ಸಿನಿಂದ ನಿನ್ನನ್ನು ನಾನು ಒಪ್ಪಿದ್ದೇನೆ ಎಂದು ಹೇಳುತ್ತಾನೆ.




