ಬೆಂಗಳೂರು: ಸರ್ಕಾರದ ಅಳಿವು ಉಳಿವು ನಿರ್ಧಾರ ಮಾಡುವ ಇಂದಿನ ವಿಶ್ವಾಸಮತ ಯಾಚನೆಯಿಂದ ತಪ್ಪಿಸಿಕೊಳ್ಳಲು ದೋಸ್ತಿ ಇನ್ನಿಲ್ಲದ ಕಸರತ್ತು ನಡೆಸಿದೆ. ಬೆಳಗ್ಗೆಯಿಂದ ವಿಶ್ವಾಸಮತ ಯಾಚನೆ ಪ್ರಕ್ರಿಯೆಗೆ ಕಾದು ಕುಳಿತ ಬಿಜೆಪಿಗೆ ಇದೀಗ ದೋಸ್ತಿ ಶಾಕ್ ನೀಡಲು ತಂತ್ರ ಹೆಣೆದಿದೆ.
ಸುಪ್ರೀಂಕೋರ್ಟ್ ಮಧ್ಯಂತರ ಆದೇಶದ ಕುರಿತ ಕ್ರಿಯಾ ಲೋಪದ ಬಗ್ಗೆ ಇಂದು ಸದನದಲ್ಲಿ ಕುತೂಹಲಕಾರಿ ಚರ್ಚೆ ನಡೆಯುತ್ತಿದೆ. ಸದನದ ಆರಂಭದಿಂದಲೂ ಕ್ರಿಯಾಲೋಪದ ಬಗ್ಗೆ ಮಾತನಾಡುತ್ತಾ ಸಮಯ ಕಳೆಯುತ್ತಿರೋ ಕಾಂಗ್ರೆಸ್ ಶಾಸಕರು ಇದೀಗ ವಿಶ್ವಾಸಮತ ಯಾಚನೆಯನ್ನೇ ಮುಂದೂಡಿಕೆ ಮಾಡುವಂತೆ ಸ್ಪೀಕರ್ ರಮೇಶ್ ಕುಮಾರ್ ರಿಗೆ ಮನವಿ ಮಾಡೋ ಮೂಲಕ ಪ್ರತಿಪಕ್ಷದ ಎದೆಬಡಿತ ಹೆಚ್ಚಿಸಿದೆ.
ಸದನದಲ್ಲಿ ವಿಶ್ವಾಸಮತ ಯಾಚನೆ ಕುರಿತು ಮಾತನಾಡಿದ ಸಿಎಲ್ ಪಿ ನಾಯಕ ಸಿದ್ದರಾಮಯ್ಯ, ಶಾಸಕರಿಗೆ ಜಾರಿಯಾಗಿರೋ ವಿಪ್ ಕುರಿತಾಗಿ ಸಾಕಷ್ಟ ಗೊಂದಲಳಿವೆ. ಹೀಗಾಗಿ ಅದು ಇತ್ಯರ್ಥವಾಗುವವರೆಗೂ ವಿಶ್ವಾಸಮತ ಯಾಚನೆ ಪ್ರಸ್ತಾಪ ಮುಂದೂಡಿಕೆ ಮಾಡುವಂತೆ ತಿಳಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸ್ಪೀಕರ್, ಈ ಕುರಿತು ನಾನು ಅಡ್ವೋಕೇಟ್ ಜನರಲ್ ಬಳಿ ಚರ್ಚೆ ಮಾಡುವ ಅಗತ್ಯವಿದೆ. ಇದಕ್ಕೆ ಅವಕಾಶವಿದೆಯೋ ಇಲ್ಲವೋ ಎಂಬುದರ ಕುರಿತು ಚರ್ಚೆ ನಡೆಸುತ್ತೇವೆ ಎಂದರು. ಬಳಿಕ ಭೋಜನ ವಿರಾಮಕ್ಕಾಗಿ ವಿಧಾನಸಭೆ ಕಲಾಪವನ್ನು ಮಧ್ಯಾಹ್ನ 3 ಗಂಟೆವರೆಗೂ ಮುಂದೂಡಿಕೆ ಮಾಡಲಾಯ್ತು.