Devotional Stories: ಅಡುಗೆ ಮನೆ ಅಂದ್ರೆ ಅನ್ನಪೂರ್ಣೆಶ್ವರಿಯ ವಾಸಸ್ಥಾನ. ಈ ಸ್ಥಳ ಸ್ವಚ್ಛವಾಗಿದ್ದರೆ, ಇಡೀ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇರುತ್ತದೆ. ಅದೇ ಅಡುಗೆ ಕೋಣೆ ಅಸಹ್ಯವಾಗಿದ್ದರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಮನೆಜನ ಆರೋಗ್ಯ ತಪ್ಪುವಂತಾಗುತ್ತದೆ. ಹಾಗಾಗಿ ಅಡುಗೆ ಮನೆಯಲ್ಲಿ ಕೆಲವು ಕೆಲಸಗಳನ್ನು ಮಾಡಬಾರದು. ಹಾಗಾದ್ರೆ ಯಾವುದು ಆ ಕೆಲಸ ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಕೆಲಸ, ಸ್ನಾನ ಮಾಡಿ ಅಡುಗೆ ಕೋಣೆ ಪ್ರವೇಶಿಸಿ. ಮೊದಲೆಲ್ಲ ಸ್ನಾನಾದಿಗಳನ್ನ ಮಾಡಿಯೇ ಹೆಣ್ಣು ಮಕ್ಕಳು ಅಡುಗೆ ಕೋಣೆ ಪ್ರವೇಶ ಮಾಡುತ್ತಿದ್ದರು. ಈಗ ಬೆಳಿಗ್ಗೆ ಬೇಗ ಬೇಗ ಕೆಲಸ ಮುಗಿಯುವ ಅನಿವಾರ್ಯತೆ ಇರುವ ಕಾರಣ, ಇಂಥ ಪದ್ಧತಿ ಕಡಿಮೆಯಾಗಿದೆ. ಆದರೆ ಅಗ್ನಿ ಮುಟ್ಟುವಾಗ, ನಾವು ಶುದ್ಧವಾಗಿರಬೇಕು ಅನ್ನೋದು ಪದ್ಧತಿ. ಇದು ಆರೋಗ್ಯಕ್ಕೂ ಉತ್ತಮ.
ಎರಡನೇಯ ಕೆಲಸ ಅಡುಗೆ ಕೋಣೆಯಲ್ಲಿ, ಕಸ ಗುಡಿಸಿ ನೆಲ ಒರೆಸಿ, ಬಳಿಕ ಒಲೆಯನ್ನ ಒರೆಸಿ, ಅಡುಗೆ ಮಾಡಲು ಶುರುಮಾಡಿ. ಅಡುಗೆ ಕೋಣೆಯಲ್ಲಿ ಕಸ, ಮುಸುರೆ ಹಾಗೆ ಇದ್ದು, ಒಲೆ ಕ್ಲೀನ್ ಇಲ್ಲದಿದ್ದಲ್ಲಿ, ಅದು ದರಿದ್ರದ ಸಂಕೇತ. ಅದೇ ದರಿದ್ರದ ಜೊತೆ ನೀವು ಅಡುಗೆ ಮಾಡಿದ್ದಲ್ಲಿ, ಅದನ್ನ ಸೇವಿಸಿದವರ ಆರೋಗ್ಯವೂ ಹದಗೆಡುತ್ತದೆ. ಮನೆಯಲ್ಲಿ ಆರ್ಥಿಕ ಪರಿಸ್ಥಿತಿಯೂ ಹದಗೆಡುತ್ತದೆ.
ಮೂರನೇಯ ಕೆಲಸ, ರಾತ್ರಿ ಮಲಗುವ ಮುನ್ನ ಬಳಸಿದ ಪ್ರತೀ ಪಾತ್ರೆಯನ್ನ ತೊಳೆದು ಮಲಗಬೇಕು. ಎಂಜಿಲು ಪ್ಲೇಟು, ಲೋಟ, ಮುಸುರೆ ಪಾತ್ರೆ ಇವುಗಳನ್ನೆಲ್ಲ ತೊಳೆಯದೇ ಮಲಗಿದ್ದಲ್ಲಿ, ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇದು ಮನೆಯವರ ಆರ್ಥಿಕ, ದೈಹಿಕ ಪರಿಸ್ಥಿತಿಯ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಮತ್ತು ರಾತ್ರಿ ಮಲಗುವಾಗ ಯಾವುದೇ ಕಾರಣಕ್ಕೂ ಅನ್ನದ ಪಾತ್ರೆಯನ್ನ ಖಾಲಿ ಮಾಡಿ, ಮಲಗಬೇಡಿ. ರಾತ್ರಿ ಕೊಂಚ ಅನ್ನವಾದರೂ ಅದರಲ್ಲಿ ಉಳಿಸಿ. ಹಾಗೇ ಇಡಿ. ಇದರಿಂದ ಅನ್ನ ಅಕ್ಷಯವಾಗುತ್ತದೆ ಅನ್ನೋ ನಂಬಿಕೆ ಇದೆ. ಲಕ್ಷ್ಮೀ ದೇವಿ ತನ್ನ ಭಕ್ತರ ಮನೆಗೆ ಬರುತ್ತಾಳೆ. ಆಕೆಗಾಗಿ ನಾವು ಅನ್ನ ತೆಗೆದಿಟ್ಟಿದ್ದೇವೆ ಅನ್ನೋ ನಂಬಿಕೆಯ ಸಲುವಾಗಿ ಹೀಗೆ ಮಾಡಬೇಕು ಅಂತಾ ಹಿರಿಯರು ಹೇಳುತ್ತಾರೆ.
ನಾಲ್ಕನೇಯ ಕೆಲಸ, ಅಡುಗೆ ಮಾಡುವಾಗ, ಕೋಪ ಮಾಡಿಕೊಂಡು, ಅಥವಾ ಯಾರನ್ನಾದರೂ ಬೈದುಕೊಂಡು, ಅಥವಾ ಯಾರಿಗಾದರೂ ಕೆಟ್ಟದ್ದನ್ನು ಬಯಸುತ್ತ ಅಡುಗೆ ಮಾಡಬೇಡಿ. ಇದರಿಂದ ಮಾಡಿದ ಅಡುಗೆಯಲ್ಲಿ ರುಚಿ, ಆರೋಗ್ಯ ಇರುವುದಿಲ್ಲ. ಅಲ್ಲದೇ, ಹೀಗೆ ಮಾಡುವುದರಿಂದ, ಅಡುಗೆ ಮಾಡುವವರ ಆರೋಗ್ಯವೂ ನಾಶವಾಗುತ್ತದೆ. ಯಾರು ಖುಷಿ ಖುಷಿಯಾಗಿ, ಶಾಂತ ಮನಸ್ಸಿನಿಂದ ಅಡುಗೆ ಮಾಡುತ್ತಾರೋ, ಅಂಥ ಮನೆಯಲ್ಲಿ ಸದಾ ಖುಷಿ, ನೆಮ್ಮದಿ ನೆಲೆಸಿರುತ್ತದೆ. ಅನ್ನಪೂರ್ಣಯ ಕೃಪೆ ಆ ಮನೆಯವರ ಮೇಲಿರುತ್ತದೆ.
ಹೆಣ್ಣು ಮಕ್ಕಳು ತಮ್ಮ ಆರೋಗ್ಯಾಭಿವೃದ್ಧಿಗೆ ಸೇವಿಸಲೇಬೇಕಾದ ಆಹಾರಗಳಿವು..