ಬೆಂಗಳೂರು: ಇಂದು ನಿಗದಿಯಾಗಿದ್ದ ಸದನದ ಕಲಾಪದಲ್ಲಿ ಕೊನೆಗೂ ವಿಶ್ವಾಸಮತ ಯಾಚನೆಯಾಗದೇ ಮುಂದೂಡಿಕೆಯಾಗಿದೆ. ಇಂದು ಬೆಳಗ್ಗಿನಿಂದ ಕಾಂಗ್ರೆಸ್-ಜೆಡಿಎಸ್ ಮತ್ತು ಬಿಜೆಪಿ ಹೈಡ್ರಾಮಾಕ್ಕೆ ಸಾಕ್ಷಿಯಾಗಿದ್ದ ವಿಧಾನಸಭಾ ಕಲಾಪ ಮೈತ್ರಿ ಸರ್ಕಾರದ ಅಳಿವು-ಉಳಿವು ನಿರ್ಧರಿಸಲಾಗಲಿಲ್ಲ.
ವಿಶ್ವಾಸಮತ ಯಾಚನೆ ಮಾಡಿದ್ರೆ ಮೈತ್ರಿ ಸರ್ಕಾರಕ್ಕೆ ಕಂಟಕ ಕಟ್ಟಿಟ್ಟ ಬುತ್ತಿ ಅಂತ ಅರಿತಿದ್ದ ದೋಸ್ತಿಗಳೂ ಕೊನೆಗೂ ಇಂದಿನ ಸದನವನ್ನು ಮುಂದೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಬೆಳಗ್ಗಿನಿಂದ ಸದನದಲ್ಲಿ ಕೇವಲ ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ಕುರಿತ ಕ್ರಿಯಾಲೋಪದ ಕುರಿತಾಗಿಯೇ ಮಾತನಾಡುತ್ತಿದ್ದ ಕಾಂಗ್ರೆಸ್ ಸದಸ್ಯರು ವಿಶ್ವಾಸಮತ ಯಾಚನೆಗೆ ಆಸ್ಪದ ನೀಡಲಿಲ್ಲ. ವಿಪಕ್ಷ ಬಿಜೆಪಿ ನಾಯಕ ಹಾಗೂ ಬಿಜೆಪಿ ಸದಸ್ಯರ ಒತ್ತಾಯದ ನಡುವೆಯೂ ದೋಸ್ತಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದೆ.
ಅತೃಪ್ತ ಶಾಸಕರು ವಿಪ್ ಉಲ್ಲಂಘಿಸಿರೋ ಕುರಿತಾಗಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದ ಹೊರತು ವಿಶ್ವಾಸಮತ ಸಾಬೀತು ಪಡಿಸಲಾಗುವುದಿಲ್ಲ ಅನ್ನೋ ಕಾಂಗ್ರೆಸ್ ಮನವಿ ಕುರಿತು ಅಡ್ವೋಕೇಟ್ ಜನರಲ್ ರನ್ನು ಸ್ಪೀಕರ್ ಸಂಜೆ ಭೇಟಿ ಮಾಡಬೇಕಾಗಿತ್ತು. ಹೀಗಾಗಿ ಸಂಜೆಗೆ ಸದನ ಜವಾಬ್ದಾರಿಯನ್ನು ಉಪಸಭಾಪತಿಯವರಿಗೆ ಒಪ್ಪಿಸಿ ಅಲ್ಲಿಂದ ಸ್ಪೀಕರ್ ನಿರ್ಗಮಿಸಬೇಕಾಯ್ತು. ಅಲ್ಲದೆ ಸಂಜೆಯ ಚರ್ಚೆ ವೇಳೆ ಶಾಸಕ ಶ್ರೀಮಂತ ಪಾಟೀಲ್ ಮುಂಬೈಗೆ ತೆರಳಿರುವ ಕುರಿತಾಗಿ ಸದನದಲ್ಲಿ ಸಾಕಷ್ಟು ಗದ್ದಲವೆದ್ದಿತು. ಇನ್ನು ಸದನದಲ್ಲಿ ಮೈತ್ರಿ ಪಕ್ಷ ಹಾಗೂ ವಿಪಕ್ಷಗಳ ಗದ್ದಲ ಮುಂದುವರಿದಿದ್ದರಿಂದ ಉಪಸಭಾಪತಿ ಸದನವನ್ನು ನಾಳೆ 11 ಗಂಟೆಗೆ ಮುಂದೂಡಿಕೆ ಮಾಡಿದ್ರು.
ಬಿಜೆಪಿ ನಿಯೋಗ ರಾಜ್ಯಾಪಾಲರನ್ನು ಭೇಟಿ ಮಾಡಿ ಇಂದೇ ವಿಶ್ವಾಸಮತ ಯಾಚನೆ ಮಾಡಲು ಮಧ್ಯ ಪ್ರವೇಶಿಸಿ ಅಂತ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರೂ ಕೂಡ ತಮ್ಮ ವಿಶೇಷಾಧಿಕಾರಿ ಮೂಲಕ ಇಂದೇ ಪ್ರಕ್ರಿಯೆ ಪೂರ್ಣಗೊಳಿಸಿ ಅಂತ ಸ್ಪೀಕರ್ ಗೆ ಸೂಚನೆ ನೀಡಿದ್ರು. ಇದಕ್ಕೂ ತಗಾದೆ ತೆಗೆದ ಕಾಂಗ್ರೆಸ್ ಸದಸ್ಯರು ರಾಜ್ಯಪಾಲರು ಸದನದಲ್ಲಿ ಈ ರೀತಿ ಸೂಚನೆ ನೀಡಲು ಬರುವುದಿಲ್ಲ ಅಂತ ಪ್ರತಿಪಾದಿಸಿಕೊಂಡರು. ಈ ಮಧ್ಯೆ ಸದನವನ್ನು ನಾಳೆಗೆ ಮುಂದೂಡಿಕೆ ಮಾಡಲಾಯ್ತು. ಇನ್ನು ಈ ಎಲ್ಲಾ ಬೆಳವಣಿಗೆಗಳಿಂದ ಆಕ್ರೋಶಗೊಂಡ ಬಿಜೆಪಿ ಇಂದು ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದೆ.
ಜೋಡೆತ್ತಿನ ಕಡೇ ಆಟ ಸಕ್ಸಸ್ ಆಗುತ್ತಾ..? ಮಿಸ್ ಮಾಡದೇ ಈ ವಿಡಿಯೋ ನೋಡಿ