Health Tips: ಗರ್ಭಾವಸ್ಥೆ ಎಂದರೆ, ಹೆಣ್ಣಿಗೆ ಇನ್ನೊಂದು ಜನ್ಮವಿದ್ದಂತೆ. ಆಕೆ ಆ ಸಮಯದಲ್ಲಿ ಎಷ್ಟು ಕಾಳಜಿ ಮಾಡಿದರೂ, ಅದು ಕಡಿಮೆಯೇ. ಏಕೆಂದರೆ, ಆಕೆಯ ಮೇಲೆ ಇನ್ನೊಂದು ಜೀವವನ್ನು ಭೂಮಿಗೆ ತರುವ ಜವಾಬ್ದಾರಿ ಇರುತ್ತದೆ. ಆ ಜೀವ, ಆರೋಗ್ಯವಾಗಿ ಇರಬೇಕೆಂದರೆ, ತಾಯಿಯಾದವಳು, ಅಪಾರ ಕಾಳಜಿ ವಹಿಸಬೇಕಾಗುತ್ತದೆ. ಹಾಗಾಗಿ ಇಂದು ನಾವು ಗರ್ಭಿಣಿಯರು 3 ತಿಂಗಳು ತುಂಬಿದ ಬಳಿಕ ಯಾವ ಆಹಾರಗಳನ್ನು ಸೇವನೆ ಮಾಡಬೇಕು ಅಂತಾ ಹೇಳಲಿದ್ದೇವೆ.
ಗರ್ಭಿಣಿಯರು ಮೂರು ತಿಂಗಳು ತುಂಬಿದ ಬಳಿಕ, ಪೌಷ್ಠಿಕಾಂಶಯುಕ್ತ ಆಹಾರದ ಜೊತೆಗೆ, ವೈದ್ಯರು ನೀಡುವ ಕಬ್ಬಿಣಾಂಶದ ಮಾತ್ರೆಯನ್ನ ಸಹ ತೆಗೆದುಕೊಳ್ಳಬೇಕು.
ಬೆಳಿಗ್ಗೆ ಎದ್ದ ತಕ್ಷಣ ನೆನೆಸಿಟ್ಟ ಡ್ರೈಫ್ರೂಟ್ಸ್ ಸೇವಿಸಬೇಕು. ಕಿತ್ತಳೆ, ದಾಳಿಂಬೆ ಹಣ್ಣಿನ ರಸ ಕುಡಿದರೂ ಉತ್ತಮ. ಪ್ರತಿದಿನ ಜ್ಯೂಸ್ ಕುಡಿಯಲು ಆಗದಿದ್ದಲ್ಲಿ, ನೆನೆಸಿಟ್ಟ ದ್ರಾಕ್ಷಿ, ಗೋಡಂಬಿ, ಬಾದಾಮಿ, ಅಖ್ರೋಟ್, ಅಂಜೂರ, ಇದರೊಂದಿಗೆ ನಾಲ್ಕೈದು ಶೇಂಗಾ ಕಾಳು, ಮತ್ತುಒಂದೆರಡು ಸ್ಪೂನ್ ಹೆಸರು ಕಾಳನ್ನು ನೆನೆಸಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಬಾದಾಮಿ ತಿನ್ನುವಾಗ, ಸಿಪ್ಪೆ ತೆಗೆದು ತಿನ್ನಬೇಕು. ಆಗಲೇ ಅದರ ಪೌಷ್ಠಿಕಾಂಶ ನಿಮಗೆ ಸಿಗುತ್ತದೆ. ಇದನ್ನೆಲ್ಲ ತಿನ್ನುವುದರಿಂದ ನಿಮ್ಮ ಮಗು ಗಟ್ಟಿಮುಟ್ಟಾಗುತ್ತದೆ. ಮೆದುಳಿನ ಬೆಳವಣಿಗೆ ಉತ್ತಮವಾಗಿರುತ್ತದೆ.
ಇದಾಗ ಒಂದು ಗಂಟೆ ಬಳಿಕ, ಆರೋಗ್ಯಕರವಾದ ತಿಂಡಿ ತಿನ್ನಿ. ಟೀ-ಕಾಫಿ ಸೇವನೆ ಮಾಡದಿದ್ದರೆ ಒಳ್ಳೆಯದು. ಇದರ ಬದಲು ನೀವು ಜ್ಯೂಸ್, ಹಾಲು ಸೇವಿಸಬಹುದು.
ಇನ್ನು ಊಟದ ಮೊದಲು ಹಸಿವಾದಾಗ, ಒಂದು ಬೌಲ್ ಫ್ರೂಟ್ಸ್ ಸೇವಿಸಿ. ಪಪ್ಪಾಯಿ, ದ್ರಾಕ್ಷಿ, ಅನಾನಸ್, ಹಲಸಿನ ಹಣ್ಣು, ಪಚ್ಚಬಾಳೆಹಣ್ಣು, ಇವಿಷ್ಟು ಹಣ್ಣನ್ನ ಗರ್ಭಿಣಿಯರು ಸೇವಿಸಕೂಡದು. ಆ್ಯಪಲ್, ದಾಳಿಂಬೆ, ಕಲ್ಲಂಗಡಿ, ಸ್ಟ್ರಾಬೇರಿ, ಕಿವಿ ಫ್ರೂಟ್ ಇಂಥ ಹಣ್ಣುಗಳನ್ನು ಸೇವಿಸಿ. ಇಲ್ಲವಾದಲ್ಲಿ ಯಾವುದಾದರೂ ಒಂದು ಹಣ್ಣನ್ನು ಸೇವಿಸಿ. ಅಥವಾ ಎಳನೀರು ಕುಡಿಯಿರಿ.
ಊಟ ಆರೋಗ್ಯಕರವಾಗಿರಲಿ, ಹಸಿ ತರಕಾರಿ, ಸೊಪ್ಪು, ಸೊಪ್ಪಿನ ಪದಾರ್ಥ, ಮೊಳಕೆ ಕಾಳು, ಮೊಳಕೆ ಕಾಳಿನ ಪದಾರ್ಥ, ತುಪ್ಪ, ಮೊಸರು, ಮಜ್ಜಿಗೆ ಇವೆಲ್ಲವೂ ಊಟದಲ್ಲಿರಲಿ. ಹೆಚ್ಚು ಖಾರವಾದ, ಮಸಾಲೆಯುಕ್ತ ಪದಾರ್ಥ ಸೇವಿಸಬೇಡಿ.
ಸಂಜೆಯ ವೇಳೆ ಸೂಪ್, ಸ್ವೀಟ್ ಕಾರ್ನ್, ಇಂಥ ಆರೋಗ್ಯಕರವಾದ ರುಚಿಕರವಾದ ತಿಂಡಿಯನ್ನ ತಿನ್ನಿ. ಗರ್ಭಿಣಿ ಎಂದ ಮೇಲೆ ಆಕೆಗೆ ಬಯಕೆ ಇರುತ್ತದೆ. ಆದರೆ ಜಂಕ್ ಫುಡ್, ಎಣ್ಣೆ ಪದಾರ್ಥಗಳನ್ನು ಹೆಚ್ಚು ತಿನ್ನಬೇಡಿ. ಅಲ್ಲದೇ, ಚಪಾತಿ, ರೊಟ್ಟಿ ದೇಹಕ್ಕೆ ಉಷ್ಣವಾಗಿರುವ ಕಾರಣ, ಇದರ ಬಳಕೆ ಅತೀ ಕಡಿಮೆಯಾಗಿರಲಿ. ರಾತ್ರಿ ಊಟ ಮಾಡುವಾಗ ಮೊಸರಿನ ಬಳಕೆ ಬೇಡ. ತಪ್ಪದೇ ತುಪ್ಪದ ಸೇವನೆ ಮಾಡಿ. ರಾತ್ರಿ ಮಲಗುವಾಗ ಬಿಸಿಯಾದ ಹಾಲು ಕುಡಿದು ಮಲಗಿ.
ನೀವು ಆಹಾರದ ವಿಷಯದಲ್ಲಿ ಇಂಥ ತಪ್ಪು ಮಾಡುವುದರಿಂದಲೇ ಸಂತಾನ ಸಮಸ್ಯೆಯಾಗುತ್ತದೆ..