ಯುಗಾದಿ ಎಂದರೇನೆ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದು. ಇದನ್ನು ವರ್ಷದ ಪ್ರಥಮ ಹಬ್ಬವೆಂದೇ ಹೇಳಬಹುದು. ಇಂಥ ಶುಭ ದಿನದಂದು ಮನೆಯಲ್ಲಿ ಭರ್ಜರಿ ಅಡುಗೆಯಂತು ತಯಾರಾಗೇ ಆಗತ್ತೆ. ಹಾಗಾಗಿ ನಾವಿಂದು ಈರುಳ್ಳಿ, ಬೆಳ್ಳುಳ್ಳಿ ಬಳಸದೇ, ಸಾತ್ವಿಕವಾಗಿ ಹೇಗೆ ಪಾಲಕ್ ರೈಸ್ ಮಾಡೋದು ಅಂತಾ ಹೇಳಲಿದ್ದೇವೆ..
ಬೇಕಾಗುವ ಸಾಮಗ್ರಿ: ಒಂದು ದೊಡ್ಡ ಕಪ್ ಅಕ್ಕಿ, ಒಂದು ಕಪ್ ಪಾಲಕ್ ಸೊಪ್ಪು, ಕಾಲು ಕಪ್ ಕೊತ್ತೊಂಬರಿ ಸೊಪ್ಪು ಪುದೀನಾ ಸೊಪ್ಪು, 1 ಆಲೂಗಡ್ಡೆ, ಕ್ಯಾರೆಟ್, ಕ್ಯಾಪ್ಸಿಕಂ, ಅರ್ಧ ಕಪ್ ಸ್ವೀಟ್‌ಕಾರ್ನ್, ಕೊಂಚ ಕ್ವಾಲಿ ಫ್ಲವರ್, ಅರ್ಧ ಕಪ್ ಬಟಾಣಿ, ಶುಂಠಿ, ಹಸಿಮೆಣಸಿನಕಾಯಿ, 2 ಪಲಾವ್ ಎಲೆ, 2 ಚಕ್ಕೆ, 4 ಲವಂಗ, 2 ಏಲಕ್ಕಿ, ಕೊಂಚ ಗಸಗಸೆ, 5 ಕಾಳುಮೆಣಸು, ಕೊಂಚ ಜೀರಿಗೆ, ಕೊಂಚ ಸೋಂಪು, ಧನಿಯಾ ಪುಡಿ, ಬೆಳ್ಳುಳ್ಳಿ ಹಾಕದ ಗರಂ ಮಸಾಲೆ ಪುಡಿ, ಅರಿಶಿನ, ತುಪ್ಪ, 1 ಸ್ಪೂನ್ ನಿಂಬೆ ರಸ, ಅವಶ್ಯಕತೆ ಇದ್ದಷ್ಟು ಉಪ್ಪು.
ಮಾಡುವ ವಿಧಾನ: ಮೊದಲು ಪಾಲಕ್, ಕೊತ್ತೊಂಬರಿ ಸೊಪ್ಪು, ಪುದೀನಾವನ್ನು ಚೆನ್ನಾಗಿ ತೊಳೆದು, ಮಿಕ್ಸಿ ಜಾರ್‌ಗೆ ಹಾಕಿ. ಇದಕ್ಕೆ ಹಸಿಮೆಣಸು, ಶುಂಠಿ, ಜೀರಿಗೆ, ಸೋಂಪು, ಕಾಳುಮೆಣಸು, ಉಪ್ಪು ಮತ್ತು ಕೊಂಚ ಸಕ್ಕರೆ ಹಾಕಿ ಪೇಸ್ಟ್ ಮಾಡಿ. ಈಗ ಕುಕ್ಕರ್ ಬಿಸಿ ಮಾಡಿ, ಅದರಲ್ಲಿ ತುಪ್ಪ ಹಾಕಿ, ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಗಸಗಸೆ ಹಾಕಿ ಹುರಿಯಿರಿ. ಇದಕ್ಕೆ ಕ್ಯಾರೆಟ್, ಕ್ಯಾಪ್ಸಿಕಂ, ಸ್ವೀಟ್ ಕಾರ್ನ್ ಹಾಕಿ ಚೆನ್ನಾಗಿ ಹುರಿಯಿರಿ.
ನಂತರ ಕ್ವಾಲಿ ಫ್ಲವರ್, ಬಟಾಣಿ ಮತ್ತು ಬಟಾಟೆ ಹಾಕಿ, ಮತ್ತೆ ಹುರಿಯಿರಿ. ಇದರೊಂದಿಗೆ ತೊಳೆದು ಸ್ವಚ್ಛ ಮಾಡಿದ ಅಕ್ಕಿ ಸೇರಿಸಿ, ಮತ್ತಷ್ಟು ಹುರಿಯಿರಿ. ಇದಕ್ಕೆ ಗರಂ ಮಸಾಲೆ, ಧನಿಯಾ ಪುಡಿ, ಅರಿಶಿನ, ಪಾಲಕ್ ಪೇಸ್ಟ್, ನಿಂಬೆ ರಸ ಎಲ್ಲವನ್ನೂ ಹಾಕಿ, ಕುಕ್ಕರ್ ವಿಶಿಲ್ ಬರಿಸಿ. ಈಗ ಪಾಲಕ್ ರೈಸ್ ರೆಡಿ. ಇದರೊಂದಿಗೆ ತುಪ್ಪ ಬೆರೆಸಿ ತಿನ್ನಬಹುದು.