ತುಳಸಿ ಇಲ್ಲದ ಪೂಜೆ ಒಲ್ಲನೊ, ಹರಿ ಕೊಳ್ಳನೋ ಅನ್ನೋ ಹಾಡಿನಂತೆ, ತುಳಸಿ ಬಳಸದೇ ಮಾಡಿದ ವಿಷ್ಣು ಪೂಜೆ, ಕೃಷ್ಣ ಪೂಜೆ ವ್ಯರ್ಥ ಅಂತಾ ಹೇಳಲಾಗತ್ತೆ. ಆದ್ರೆ ಗಣಪತಿಗೆ ಮಾತ್ರ ತುಳಸಿ ಅರ್ಪಿಸಬಾರದು ಅಂತಾ ಹೇಳಲಾಗತ್ತೆ. ನೀವೇನಾದ್ರೂ ಗಣೇಶನಿಗೆ ತುಳಸಿಯನ್ನ ಅರ್ಪಿಸಿದ್ರೆ, ಒಳ್ಳೆಯದಲ್ಲ. ಅದರಿಂದ ಕಷ್ಟ ಬರತ್ತೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಯಾಕೆ ಗಣೇಶನಿಗೆ ತುಳಸಿಯನ್ನು ಅರ್ಪಿಸಬಾರದು ಅಂತಾ ತಿಳಿಯೋಣ ಬನ್ನಿ.
ಒಮ್ಮೆ ಗಂಗಾನದಿ ತೀರದಲ್ಲಿ ಗಣೇಶ ತಪಸ್ಸಿನಲ್ಲಿ ಲೀನನಾಗಿದ್ದ. ಇನ್ನೊಂದೆಡೆ ಧರ್ಮಾತ್ಮನ ಮಗಳು ತುಳಸಿ ವಿವಾಹದ ವಯಸ್ಸಿಗೆ ಬಂದಿದ್ದಳು. ಆಕೆ ಪುಣ್ಯಕ್ಷೇತ್ರಗಳ ದರ್ಶನ ಮಾಡುತ್ತ ಗಂಗಾನದಿ ತಟಕ್ಕೆ ಬಂದಿದ್ದಳು. ಆಕೆ ಅಲ್ಲೇ ಧ್ಯಾನದಲ್ಲಿ ಮಗ್ನನಾಗಿದ್ದ ಗಣಪನನ್ನು ಕಂಡಳು. ಆಕೆಗೆ ಗಣಪನ ಮೇಲೆ ಮನಸ್ಸಾಯಿತು. ಆಕೆ ಗಣಪನ ತಪಸ್ಸನ್ನು ಭಂಗ ಮಾಡಿದಳು.
ಇದರಿಂದ ಗಣೇಶನಿಗೆ ಕೋಪ ಬಂದರೂ ಕೂಡ, ತುಳಸಿ ಹೆಣ್ಣೆಂಬ ಕಾರಣಕ್ಕೆ, ಆ ಕೋಪವನ್ನು ತೋರಿಸಿಕೊಳ್ಳದೇ, ಯಾಕೆ ತನ್ನ ತಪಸ್ಸು ಭಂಗ ಮಾಡಿದಿರಿ..? ನೀವು ಹೀಗೆ ಮಾಡಿದ್ದು ಸರಿಯಲ್ಲ ಎಂದು ಹೇಳಿದ. ಅದಕ್ಕೆ ಆಕೆ, ನನಗೆ ವಿವಾಹದ ವಯಸ್ಸಾಗಿದೆ. ಉತ್ತಮ ವರ ಸಿಗಲೆಂದು ನಾನು ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ಬಂದಿದ್ದೆ.
ನಿಮ್ಮನ್ನು ನೋಡಿ ಪ್ರೇಮಾಂಕುರವಾಗಿದೆ. ನನ್ನನ್ನು ವಿವಾಹವಾಗುವಿರೇ ಎಂದು ತುಳಸಿ ಗಣೇಶನಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಳು. ಅದಕ್ಕೆ ನಿರಾಕರಿಸಿದ ಗಣಪ ಇಲ್ಲ ನಾನು ಜೀವನ ಪೂರ್ತಿ ಅವಿವಾಹಿತನಾಗಿರಬೇಕು ಎಂದುಕೊಂಡಿದ್ದೇನೆ. ನಾನು ಕೊನೆಯವೆರಗೂ ಅಪ್ಪ ಅಮ್ಮನ ಸೇವೆ ಮಾಡಿಕೊಂಡಿರಬೇಕು ಎಂದಿದ್ದೇನೆ ಎನ್ನುತ್ತಾನೆ.
ಈ ಮಾತನ್ನು ಕೇಳಿ ತುಳಸಿಗೆ ಕೋಪ ಬರುತ್ತದೆ. ಆಕೆ ನಿನ್ನ ಆಸೆ ಈಡೇರದೆ ಇರಲಿ, ನಿನಗೆ ಎರಡೆರಡು ಮದುವೆಯಾಗಲಿ. ಆದರೂ ನೀನು ಅವಿವಾಹಿತನಂತೆ ಇರುವಂತಾಗಲಿ ಎಂದು ಶಾಪ ನೀಡುತ್ತಾಳೆ. ಅದಕ್ಕೆ ಕೋಪಗೊಂಡ ಗಣೇಶ, ನಿನ್ನ ವಿವಾಹ ಓರ್ವ ರಾಕ್ಷಸನೊಂದಿಗೆ ಆಗಲಿ ಎಂದು ಶಾಪ ನೀಡುತ್ತಾನೆ. ಆಗ ತುಳಸಿ ಗಣೇಶನಲ್ಲಿ ಕ್ಷಮೆಯಾಚಿಸುತ್ತಾಳೆ.
ಆದಕ್ಕೆ ಗಣೇಶ, ನಿನ್ನ ವಿವಾಹ ರಾಕ್ಷಸನೊಂದಿಗೆ ಆಗುತ್ತದೆ. ಆದರೆ, ನೀನು ಕೃಷ್ಣ ಮತ್ತು ವಿಷ್ಣುವಿಗೆ ಪ್ರಯಳಾಗುವೆ. ಭವಿಷ್ಯದಲ್ಲಿ ಜನ ನಿನ್ನನ್ನು ದೇವಿಯ ರೂಪದಲ್ಲಿ ಪೂಜಿಸುತ್ತಾರೆ. ನಿನ್ನ ಪೂಜೆ ಮಾಡುವವರ ಮನೆಯಲ್ಲಿ ಸದಾ ಸುಖ ಶಾಂತಿ ನೆಲೆಸಿರುತ್ತದೆ ಎಂದು ಹೇಳುತ್ತಾನೆ. ಹೀಗಾಗಿ ತುಳಸಿಯನ್ನು ಗಣೇಶನಿಗೆ ಅರ್ಪಿಸಲಾಗುವುದಿಲ್ಲ.
ರಾಮಾಯಣ ಕಾಲದಲ್ಲಿ ಸೀತಾದೇವಿ ಗೋವು, ಕಾಗೆ, ನದಿ ಮತ್ತು ಪುರೋಹಿತರಿಗೆ ನೀಡಿದ್ದಳು ಈ ಶಾಪ..
ಧ್ರುವ ನಕ್ಷತ್ರದ ಹಿಂದಿರುವ ರಹಸ್ಯವೇನು ಗೊತ್ತಾ..? ಓರ್ವ ಬಾಲಕ ಧ್ರುವ ನಕ್ಷತ್ರವಾಗಿದ್ದು ಹೇಗೆ..?